Thursday, September 9, 2010

ಗೋ ಹತ್ಯೆ ಕೇವಲ ಇಶ್ಯೂ ಆಗಬಾರದು


ಸನಾದಿಕಾಲದಿಂದಲೂ ಗೋವನ್ನು ಪೂಜಿಸುತ್ತಿರುವ ಹಿಂದೂಗಳು, ಆರಾಧ್ಯದೈವವನ್ನಾಗಿಸಿಕೊಂಡಿದ್ದಾರೆ. ಅದರ ದೇಹದಲ್ಲಿ ನೂರಾರು ದೇವತೆಗಳು ಇದ್ದಾರೆ ಎನ್ನುವ ನಂಬಿಕೆ. ಅದರ ಸಗಣಿ, ಗಂಜಲ ಎಲ್ಲಾ ಕೂಡ ಉಪಯುಕ್ತ.ಇದು ಇವತ್ತಿನ ವಿಜ್ಞಾನ ಯುಗದಲ್ಲಿ ಪ್ರೂವ್ ಆಗಿದೆ ಕೂಡ. ಇದೀಗ ಸಾಕಷ್ಟು ಔಷಧಿಗಳಿಗೆ ಬಳಕೆಯಾಗುತ್ತಿದೆ. ವಿದೇಶಿಯರು ಕೂಡ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಗೋ ಹತ್ಯೆ ಅನ್ನುವುದು ಇಂದು ನೆನ್ನೆಯದಲ್ಲ. ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇದೆ. ಕೆಲವರು ರಾಜಾರೋಷವಾಗಿ ತಿಂದರೆ, ಮತ್ತಿತರರು ಕದ್ದು ತಿನ್ನುತ್ತಲೇ ಇದ್ದಾರೆ. 1964r ಕಾಯ್ದೆಯ ಪ್ರಕಾರ ಗೋವುಗಳನ್ನು ಹಿಂಸಿಸಿದರೆ 25ಸಾವಿರ ದಂಡ ಹಾಗೂ 7ವರ್ಷ ಸಜೆ ಎಂದು ಇದೆ. ತಿನ್ನುವುದಕ್ಕೆಂದೇ ಕುರಿ, ಕೋಳಿಗಳು ಇದ್ದರೂ ಮನುಷ್ಯನಿಗೆ ಹೆಚ್ಚಿನ ಸಹಕಾರಿಯಾಗಿರುವ ದನ ಯಾಕೆ ಎನ್ನುವುದು ಎಲ್ಲರಲ್ಲಿನ ಪ್ರಶ್ನೆ. ಕಾರಣ ಹಣದ ಬೆಲೆ ಎನ್ನುವ ಸಾಮಾನ್ಯ ಉತ್ತರ. ಹಿಂದೂ ಹಬ್ಬಗಳು ಹೊರತು ಇತರೆ ಧರ್ಮೀಯರ ಹಬ್ಬ ಬಂತೆಂದರೆ ದನಗಳ ಮಾರಣ ಹೋಮ ನಿಶ್ಚಿತ.ರಾತ್ರಿ ಸಮಯದಲ್ಲಿ ಕಾಲೇಜು ಮೈದಾನಗಳ ಕಸಾಯಿ ಖಾನೆಗಳಾಗಿರುತ್ತದೆ.ಪೊಲೀಸರಿಗೆ ಗೊತ್ತಿದ್ದರೂ ಸುಮ್ಮನಿರುವುದು ಅನಿವಾರ್ಯತೆ. ಭಾರತ ದೇಶ ಹಿಂದೂ ದೇಶ ಅಂತಾಗಿದ್ದರೂ ಎಲ್ಲಾ ಮತದವರು ಇರುವುದರಿಂದ ಬಹುಧರ್ಮೀಯರ ದೇಶವಾಗಿದೆ. ಹಾಗಂತ ನಮ್ಮ ಮೂಲ ಧ್ಯೇಯ ಉದ್ದೇಶಗಳನ್ನು ಬಲಿಕೊಡುವುದು ಎಷ್ಟರ ಮಟ್ಟಿಗೆ ಸರಿ. ಇದೀಗ ಬಿಜೆಪಿ ಹೊಸ ಇಶ್ಯೂ ಒಂದನ್ನು ತೆಗೆದುಕೊಂಡಿದೆ. ಅದು "ಗೋಹತ್ಯಾ ನಿಷೇಧ ಮಸೂದೆ", ಗಣಿ ಗದ್ದಲದ ನಡುವೆ ನಲುಗಿರುವ ಬಿಜೆಪಿ ಸರ್ಕಾರ ತನ್ನ ಉಳಿವಿಗೆ ಗೋಹತ್ಯೆ ಬಳಸುತ್ತಿದೆ. ಇದರಿಂದ ಎಲ್ಲಿ ಬಿಜೆಪಿಗೆ ಲಾಭವಾಗುತ್ತದೋ ಎನ್ನುವ ಭಯದಲ್ಲಿ ದೇವೆಗೌಡ ಸಿದ್ದರಾಮಯ್ಯ ಇನ್ನಿಲ್ಲದಂತೆ ಭುಸಗುಟ್ಟುತ್ತಿದ್ದಾರೆ. ನಾನು ಗೋ ಮಾಂಸ ತಿನ್ನುತ್ತೇನೆ ಎನ್ನುವ ಸಿದ್ದರಾಮಯ್ಯನವರ ಬಾಲಿಶ ಹೇಳಿಕೆ. ಹಾಗೇ ಮುದಿ ದನಗಳನ್ನು ಕೇಶವ ಕೃಪಾದ ಮುಂದೆ ಕಟ್ಟುತ್ತೇನೆಂಬ ಮಾಜಿ ಪ್ರಧಾನಿ ದೇವೆಗೌಡರ ಬಾಲಿಶವಾದ ಮಾತು. ಮುಂದಿನ ತಮ್ಮ ಅಸ್ಥಿತ್ವ ಉಳಿಯಬೇಕಾದರೆ ಹಾಗೇ ಗಣಿ ಧೂಳನ್ನು ಜನರಿಂದ ಮರೆಸಿ ವಿರೋಧ ಪಕ್ಷದವರನ್ನು ಹಳೆಯುವ ಯತ್ನಕ್ಕಾಗಿ ಈ ನಿಷೇಧಕ್ಕೆ ಬಿಜೆಪಿ ನಿಶ್ಚಿತವಾಗಿ ಮುಂದಾಗಿದೆ. ಆದರೆ ಇದು ಯಶಸ್ವಿಯಾಗುತ್ತದಾ ಎನ್ನುವುದು ಮಾತ್ರ ಪ್ರಶ್ನೆ.

ರಾಜ್ಯದಲ್ಲಿ ದಿನ ನಿತ್ಯ ಒಂದಲ್ಲ ಒಂದು ರಸ್ತೆಯಲ್ಲಿ ವಾಹನಗಳು ಗೋವಿನ ಮೇಲು ಹರಿದು ಪ್ರಾಣ ತೆಗೆಯುತ್ತದೆ. ಇದೂ ಕೂಡ ಹತ್ಯೆ ತಾನೆ. ಇದರ ಬಗ್ಗೆ ಎಷ್ಟು ಕೇಸುಗಳು ದಾಖಲಾಗಿದೆ ಗೊತ್ತಿಲ್ಲ.ಅನಾಥವಾಗಿ ಸತ್ತಿರುತ್ತದೆ. ಇದರ ಬಗ್ಗೆ ಯಾರಾದರೂ ಗೋ ಸಂಘಟನೆಯವರು ಹೋರಾಡುತ್ತಾರಾ ಎಂದು ಹುಡುಕಿದರೆ ಕಾಣುವುದೇ ಇಲ್ಲ. ಇವರು ಮಸೂದೆ ಮಾಡಿದಾಕ್ಷಣ ಗೋ ಹತ್ಯೆ ನಿಂತು ಬಿಡುತ್ತದೆಯೇ, ಖಂಡಿತಾ ಇಲ್ಲ. ಕಾರಣ ನಮ್ಮಲ್ಲಿರುವ ಭ್ರಷ್ಟಾಚಾರ. ಸಾರಾಯಿ ನಿಷೇಧವಾಗಿದೆ. ಆದರೆ ಅದು ಜಾರಿಗೆ ಬಂದಿದೆಯೇ ಇಲ್ಲ. ಪ್ರತಿ ಹಳ್ಳಿಗಳಲ್ಲೂ ಕಳ್ಳಭಟ್ಟಿ,ಸೆಕೆಂಡ್ಸ್ ಮದ್ಯ ಸಿಗುತ್ತಲೇ ಇದೆ. ಜನ ಸಾಯುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಲೇ ಇದ್ದೇವೆ. ಹಾಗಾದರೆ ಗೋ ಹತ್ಯೆ ಕೂಡ ಒಂದು ಇಶ್ಯುವಾಗಿ ಮಾತ್ರ ಉಳಿಯುತ್ತದೆ. ರಾಜ್ಯದಲ್ಲಿ ನೂರಾರು ಕಸಾಯಿ ಖಾನೆಗಳು ಇದೆ. ಸಾಕಷ್ಟು ಜನ ದಳ್ಳಾಳಿಗಳು ದನದ ಜಾತ್ರೆಯ ನೆಪದಲ್ಲಿ ಕಟುಕರಿಗೆ ಮಾರುತ್ತಾರೆ. ಗೊಡ್ಡು ಹಸುಗಳು, ಮುದಿ ಎತ್ತುಗಳನ್ನ ಕಸ ತುಂಬಿದಂತೆ ಆಟೋಗಳಲ್ಲಿ ತುಂಬಿಕೊಂಡು ಪೊಲೀಸರೆದುರೇ ರಾಜಾರೋಷವಾಗಿ ಕೊಂಡೊಯ್ಯುತ್ತಾರೆ. ಇದರ ಬಗ್ಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ ಅವರುಗಳನ್ನೇ ಜೈಲಿಗೆ ಅಟ್ಟುವಂತಹ ಕಾರ್ಯವಾಗಿತ್ತಿದೆ. ಇನ್ನು ಬಿಜೆಪಿ ಮುಖಂಡರುಗಳೇ ಕಟುಕರನ್ನು ಬೆಂಬಲಿಸಿದಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. ಇದು ಅಲ್ಪ ಸಂಖ್ಯಾತರ ಮನವೊಲಿಕೆಯಲ್ಲವೆ. ಬಿಜೆಪಿ ಸರ್ಕಾರ ಬಂದ ನಂತರ ಎಷ್ಟು ಮದರಸಗಳು ತಲೆಯೆತ್ತಿದೆ ಎನ್ನುವುದನ್ನು ಗಮನಿಸಿದರೆ ಬಿಜೆಪಿ ಕಾಂಗ್ರೆಸ್ಸಿಗೆ ಹೊರತೇನಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಬಿಜೆಪಿ ನಾಯಕರುಗಳಿಗೆ ನಿಜವಾಗಲೂ ಗೋವಿನ ಬಗ್ಗೆ ಮಮಕಾರವಿದ್ದರೆ ಮೊದಲು ಪೊಲೀಸ್ ರೆಕಾರ್ಡ್ನಲ್ಲಿರುವ ಕಸಾಯಿ ಖಾನೆಗಳನ್ನು ಮುಚ್ಚಿಸಲಿ. ಅದಕ್ಕೆ ಸಂಬಂಧ ಪಟ್ಟ ದಳ್ಳಾಳಿಗಳನ್ನು ಜೈಲಿಗೆ ಅಟ್ಟಲಿ. ಹಾಗೇ ಯಾವ ರೈತ ತನ್ನ ದನಕರುಗಳನ್ನು ಕಟುಕರಿಗೆ ಮಾರುತ್ತಿದ್ದಾನೆ ಎಂದು ತಿಳಿದು ಬಂದರೆ ಅಂತವರಿಗೆ ಸರ್ಕಾರದ ಯೋಜನೆಗಳನ್ನು ತಡೆಗಟ್ಟಲಿ. ಹಾಗೇ ಬಿಜೆಪಿ ನಾಯಕರುಗಳು ಕೂಡ ಕೇವಲ ಹೋಮ, ಹವನಕ್ಕಾಗಿ ಗೋಗಳನ್ನು ಬಳಕೆ ಮಾಡದೆ ಮನೆಯಲ್ಲಿ ಕೊಟ್ಟಿಗೆ ಮಾಡಿ ಸಾಕುವಂತಾಗಲಿ. ಇಲ್ಲವಾದರೆ ಸುಖಾ ಸುಮ್ಮನೆ ಒಬ್ಬರ ಮೇಲೆ ಒಬ್ಬರು ಕೆಸರು ಎರೆಚುತ್ತಾ ರಾಜಕೀಯ ಲಾಭ ಪಡೆಯಲು ಹೋದರೆ ಇದು ಬಹಳ ದಿನ ಉಳಿಯುವುದಿಲ್ಲ. ನಿಜ ಕಾಂಗ್ರೆಸ್ ಇದ್ದ ಆಂಧ್ರಪ್ರದೇಶ, ಮಧ್ಯಪ್ರದೇಶ,ರಾಜಸ್ತಾನ್,ಗುಜರಾತ್ ನಲ್ಲಿ ನಿಷೇಧ ಮಾಡಲಾಗಿದೆ. ಇಲ್ಲಿ ಯಾಕೆ ಮಾಡುತ್ತಿಲ್ಲ ಎಂದರೆ ಮತ್ತೆ ಅದೇ ಕೊಳಕು ರಾಜಕೀಯ. ಅಲ್ಪ ಸಂಖ್ಯಾತರ ಓಲೈಕೆ. ಬಿಜೆಪಿ ಗೋ ಹತ್ಯೆ ನಿಷೇಧ ಎಂದು ಮಾತ್ರ ಹೇಳುತ್ತಿದೆ. ಈವರೆಗೆ ಕಸಾಯಿ ಖಾನೆಗಳಿಗೆ ಕಡಿವಾಣವೇ ಬಿದ್ದಿಲ್ಲ. ಬರೀ ಪ್ರತಿಭಟನೆ. ಹಿಂದೂಗಳನ್ನು ಓಲೈಸಿ, ಮುಸ್ಲಿಂಮರಿಗೆ ಮಣೆ ಹಾಕುವ ಮತ್ತೊಂದು ಕಾರ್ಯವಷ್ಟೆ. ಇದೂ ಕೂಡ ರಾಮ ಜನ್ಮಭೂಮಿ, ದತ್ತಪೀಠದಂತಹ ಇಶ್ಯೂ ಮಾತ್ರವಾಗಿ ಉಳಿಯುತ್ತದೆ. ಇವರಿಗೆ ತಾಕತ್ತಿದ್ದರೆ ಬೆಂಗಳೂರಿನ ಶಿವಾಜಿನಗರ ಮತ್ತಿತರ ಪ್ರದೇಶಗಳಲ್ಲಿ ರಾಜಾರೋಷವಾಗಿ ದನ ಕಡೆದು ತೂಗು ಹಾಕಿರುತ್ತಾರೆ. ರಾಣಿಬೆನ್ನೂರು,ಮಾಸೂರು ಹಾಗೂ ಮತ್ತಿತರೆಡೆ ರಾಜಾರೋಷವಾಗಿ ಕಡೆಯುತ್ತಾರೆ. ಮೊದಲು ಇದನ್ನು ನಿಲ್ಲಿಸಿಲಿ. ಇದೆಲ್ಲಾ ಪೊಲೀಸರಿಗೆ ತಿಳಿದಿರುವ ವಿಷಯವೇನಲ್ಲ ಆದರೆ ಯಾಕೆ ಬೇಕು ಎನ್ನುವ ತಿರಸ್ಕಾರ ಮನೋಭಾವ.
ಇದೊಂದು ಉತ್ತಮ ಮಸೂದೆಯಾದರೂ ಇದು ಬಳಕೆಯಾಗುವ ಕ್ರಮ ಮಾತ್ರ ಗುಪ್ತವಾಗಿಯೇ ಇದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಕಾಂಗ್ರೆಸ್ಸಿಗರು ಮತ್ತು ಜೆಡಿಎಸ್ ನವರು ಇದರಿಂದಾಗಿ ವಿನಾಕಾರಣ ಹಿಂದೂಗಳ ದ್ವೇಷ ಕಟ್ಟಿಕೊಳ್ಳುವಂತಾಗಿದೆ. ಅವರು ಬುದ್ದಿವಂತರಾಗಿದ್ದರೆ ಮಸೂದೆ ಜಾರಿಗೆ ತಂದ ಮೇಲೆ. ಅದರ ಲೋಪದೋಷಗಳನ್ನು ಜನರಿಗೆ ಎತ್ತಿ ಹಿಡಿದದಿದ್ದರೆ, ಕಡೂರು, ಗುಲ್ಬರ್ಗ ಉಪಚುನಾವಣೆಗೆ ಸ್ವಲ್ಪನಾದರೂ ಲಾಭವಾಗುತ್ತಿತ್ತು ಏನೋ. ಆದರೆ ಅವರಿಗೆ ಗಣಿ ಬಿಟ್ಟು ಬೇರೆ ಏನು ಗೊತ್ತಿಲ್ಲದಂತೆ ಕಾಣುತ್ತದೆ. ಬಿಜೆಪಿಯ ಚಾಣಾಕ್ಷತೆಗೆ ಗೋ ಹತ್ಯಾ ನಿಷೇಧ ಕಾಯ್ದೆ ಉತ್ತಮ ಉದಾಹರಣೆಯಾಗಿದೆ. ಇದೀಗ ಅರಣ್ಯ ಭೂಮಿಯಲ್ಲಿನ ಬಗರ್ ಹುಕಂ ವಿವಾದದಲ್ಲೂ ಬಿಜೆಪಿ ಕೇಂದ್ರದ ಮೇಲೆ ಒತ್ತಡ ಹಾಕುವುದರ ಮೂಲಕ ವಿರೋಧ ಪಕ್ಷದವರನ್ನು ಜನರೆದುರು ನಗೆಪಾಟಿಲಿಗೆ ಈಡು ಮಾಡುತ್ತಿರುವುದಂತೂ ಸುಳ್ಳಲ್ಲ. ಯಡಿಯೂರಪ್ಪನವರ ಹಲವಾರು ದಿನಗಳ ರಾಜಕೀಯ ಬುದ್ದಿ ಈಗ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

No comments:

Post a Comment