Monday, June 28, 2010

ಅಪರೂಪದ ವಿಶಿಷ್ಟ ಕಲಾವಿದ ಕಾಶಿ



ಕಲೆಯೆನ್ನುವುದು ಎಲ್ಲರಲ್ಲಿರುತ್ತೆ ಆದರೆ ವಿಶೇಷವಾದ ಕಲೆಗಳು ಕೆಲವರಿಗೆ ಮಾತ್ರ ಒಲೆದಿರುತ್ತದೆ. ಅದರಲ್ಲೂ ವಿಗ್ರಹ ಕೆತ್ತನೆ ಮತ್ತು ಸಿಮೆಂಟ್ ವಿಗ್ರಹಗಳನ್ನು ರೂಪಿಸುವಂತಹ ಕಲೆ ಬಹಳ ವಿಶಿಷ್ಟ. ಅಂತಹ ಕಲೆಯನ್ನು ಕರಗತ ಮಾಡಿಕೊಂಡು ಇಂದು ದೇಶಾದ್ಯಂತ ಪ್ರಸಿದ್ದಿಯಾಗಿರುವ ಕಾಶಿನಾಥ್ ಶಿಕಾರಿಪುರದವರು ಎನ್ನುವುದಕ್ಕಿಂತ ಕರ್ನಾಟಕ ರಾಜ್ಯದವರು ಎನ್ನುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ.

ಶಿಕಾರಿಪುರದ ಹುಚ್ಚರಾಯಸ್ವಾಮಿ ಕೆರೆಯ ತಟದಲ್ಲಿ ನಿರ್ಮಾಣವಾಗಿರುವ ಈಶ್ವರ ವಿಗ್ರಹ




ಇವರು ಕಳೆದ ಹತ್ತಾರು ವರ್ಷಗಳಿಂದ ಕಲ್ಲು ಕೆತ್ತನೆ, ಸಿಮೆಂಟ್ ವಿಗ್ರಹಗಳ ಸ್ಥಾಪನೆ ಸೇರಿದಂತೆ ವಿವಿಧ ಪುರಾತನ ಶಿಲ್ಪಕಲೆಗಳನ್ನು ರಚಿಸುವುದರ ಮೂಲಕ ಬಹಳಷ್ಟು ಪ್ರಸಿದ್ದಿ ಪಡೆದಿದ್ದಾರೆ. ಇವರು ನಿರ್ಮಿಸಿರುವ ಸಣ್ಣ ವಿಗ್ರಹಗಳು ಇಂದು ಜಗತ್ತಿನ ಸಾಕಷ್ಟು ದೇಶಗಳಲ್ಲಿ ಕಂಡು ಬರುತ್ತಿದೆ.

ಬೆಂಗಳೂರಿನ ಕಿಡ್ಸ್ ಕೆಂಪಿನ ಬಳಿ ನಿರ್ಮಾಣವಾಗಿರುವ ಈಶ್ವರ ವಿಗ್ರಹ




ಕಾಶಿನಾಥ್ ಮೂಲತಃ ಶಿಕಾರಿಪುರದವರು. ಇವರ ಕೃಷ್ಣರಾವ್ ಮತ್ತು ಪಾರ್ವತಮ್ಮ ದಂಪತಿಗಳ ಹಿರಿಯ ಪುತ್ರರು. ಸಿರಿವಂತರೇನು ಅಲ್ಲ. ಅವತ್ತಿನ ಗಂಜಿಗೆ ಅವತ್ತಿನ ದುಡಿಮೆ ಎನ್ನುವಂತಹ ಮನೆತನ. ಇವರ ಕುಟುಂಬದ ಸದಸ್ಯರೆಲ್ಲರೂ ಮರಗಳ ಹಾಗೂ ಕಲ್ಲಿನ ಕೆತ್ತೆನೆ ಮಾಡುವ ಕಾಯಕದವರು. ಹಾಗಾಗಿ ಬಾಲ್ಯದಿಂದಲೇ ಕಾಶಿರವರಲ್ಲಿ ಕೆತ್ತನೆ ಕಲೆ ಬಗ್ಗೆ ಆಸಕ್ತಿ ಮೂಡಿತು. ಶಿಕಾರಿಪುರದ ಪರಸಪ್ಪ ಚಿತ್ರಗಾರ್ ಎಂಬುವರಲ್ಲಿ ಕೆಲಸಕ್ಕೆ ಸೇರಿದರು. ಪ್ರಾರಂಭದಲ್ಲಿ ಸಣ್ಣ, ಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ ಕಾಶಿ ನಂತರ ಕಲ್ಲಿನ ಕೆತ್ತನೆಗೆ ಮುಂದಾದರು.

ಮುರುಡೇಶ್ವರದಲ್ಲಿ ಸಮುದ್ರದ ತಟದಲ್ಲಿರುವ ಸಿಮೆಂಟಿನ ಈಶ್ವರ ವಿಗ್ರಹ



ರಾಜ್ಯದ ಹಲವೆಡೆ ತಮ್ಮ ಗುರುಗಳಾದ ಪರಸಪ್ಪನವರ ಜೊತೆ ಕಲ್ಲಿನ ವಿಗ್ರಹಗಳ ಕೆತ್ತನೆಯನ್ನು ಮಾಡಿದರು. "ಆ ದಿನಗಳನ್ನು ಅವರು ನೆನಸಿಕೊಳ್ಳುವುದು ಹೀಗೆ. ಆಗ ನಾವು ಹಳ್ಳಿಗಳಲ್ಲಿ ವರ್ಷಾನುಗಟ್ಟಲೆ ಮನೆ ಮಠ ಬಿಟ್ಟು ಉಳಿದುಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ಗ್ರಾಮಸ್ತರು ನಮ್ಮಗಳಿಗೆ ಮನೆ, ದಿನ ನಿತ್ಯದ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಕೆಲಸ ಮುಗಿದ ಮೇಲೆ ಅಲ್ಲಿಂದ ಹೊರಡಬೇಕಲ್ಲಾ ಎನ್ನುವ ಬೇಸರ ನಮ್ಮನ್ನು ಕಾಡುತ್ತಿತ್ತು ಎಂದರೆ ಗ್ರಾಮಸ್ತರ ಪ್ರೀತಿ ಅಷ್ಟರ ಮಟ್ಟಿಗೆ ಇರುತ್ತಿತ್ತು. ಹಾಗೇ ಈಗಿನಂತೆ ತಯಾರಾದ ಬಣ್ಣ ಸಿಗುತ್ತಿರಲಿಲ್ಲ. ನಾವೇ ಬಣ್ಣ ತಯಾರಿಸಬೇಕಿತ್ತು. ಹಸಿರು ಬಣ್ಣಕ್ಕೆ ಮರದ ಎಲೆಯ ರಸವನ್ನು ತೆಗೆದು ಒಣಗಿಸುತ್ತಿದ್ದೆವು. ಸುಣ್ಣದ ಕಲ್ಲಿನಿಂದ ಬಿಳಿಯ ಬಣ್ಣ, ತವರ ಸೇರಿದಂತೆ ವಿವಿಧ ಕಲ್ಲುಗಳಿಂದಲೂ ಬಣ್ಣ ತಯಾರಿಸುತ್ತಿದ್ದೆವು. ಈಗಿನ ಬಣ್ಣ ಕೆಲ ವರ್ಷವಾದ ನಂತರ ಮಸುಕಾಗುತ್ತದೆ. ಆದರೆ ಆ ಬಣ್ಣಗಳು ಇಂದಿಗೂ ತನ್ನ ನೈಜತೆಯನ್ನು ಉಳಿಸಿಕೊಂಡಿದೆ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. "

ಕಾಶಿನಾಥ್



ಇವರು ಮುರುಡೇಶ್ವರದಲ್ಲಿ 40ಅಡಿಯ ಸಿಮೆಂಟಿನ ಈಶ್ವರ ವಿಗ್ರಹ, ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿರುವ ಕಿಡ್ಸ್ ಕೆಂಪ್ ನ 50 ಅಡಿಯ ಈಶ್ವರ, ಕೋಲಾರದ ಆಂಜನೇಯ, ಹಿಮಾಚಲ ಪ್ರದೇಶದ 70 ಅಡಿಯ ಈಶ್ವರ, ಚಿತ್ರನಟ ಅರ್ಜುನ್ ಸರ್ಜಾಗೆ ಕಲ್ಲಿನಲ್ಲಿ ರೂಪಿಸಿದಂತಹ ಆಂಜನೇಯ ವಿಗ್ರಹ. ಹೀಗೆ ದೇಶದ ಹಲವೆಡೆ ಇವರು ನಿರ್ಮಿಸಿರುವ ವಿಗ್ರಹಗಳು ಸಿಗುತ್ತದೆ. ಇಷ್ಟೆ ಅಲ್ಲದೆ ವಿದೇಶಗಳಲ್ಲೂ ಇವರ ಕೆತ್ತನೆ ಕಲೆಗೆ ಸಾಕಷ್ಟು ಬೇಡಿಕೆಯಿದೆ. ದೇವಸ್ಥಾನದ ಗೋಪುರ, ಅದಕ್ಕೆ ವಿಶೇಷ ರೂಪ ಕೊಡುವ ಕೆಲಸವನ್ನು ಮಾಡುತ್ತಾರೆ. ಚಿಕ್ಕಂದಿನಲ್ಲಿ ಬಹಳಷ್ಟು ಮರದ ರಥಗಳನ್ನು ನಿರ್ಮಿಸಿರುವ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಇದೀಗ 70ರ ಆಸುಪಾಸಿನಲ್ಲಿರುವ ಇವರು ಹಲವಾರು ಯುವಕರಿಗೆ ಕೆಲಸ ನೀಡಿದ್ದಾರೆ. ಆದರೆ ಕಡೆಯ ಫಿನಿಷ್ ಅಂದರೆ ಕಣ್ಣು,ಮೂಗು,ತುಟಿಯನ್ನು ಮಾತ್ರ ಇವರೇ ಖುದ್ದಾಗಿ ಸ್ಥಳಕ್ಕೆ ಬಂದು ರೂಪಿಸುವುದು ಇವರ ವಿಶೇಷತೆ.
ಇವರ ಅಜ್ಜ ತಿಪ್ಪಾಜಪ್ಪ ಮೈಸೂರು ಸಂಸ್ಥಾನದಲ್ಲಿ ಸಾಂಪ್ರದಾಯಿಕ ಕಲೆಯಲ್ಲಿ ನಿಪುಣರು. ಇವರ ಕಲೆಯನ್ನು ಮೆಚ್ಚಿ ಅಂದಿನ ಮುಮ್ಮುಡಿ ಕರಷ್ಣರಾಜ ಒಡೆಯರ್ ಚಿನ್ನದ ಪದಕ ನೀಡಿ ಗೌರವಿಸಿದ್ದರು. ಇಂದಿಗೂ ಅವರು ನಿರ್ಮಿಸಿದಂತಹ ಕಲೆಗಳು ಸಾಕಷ್ಟು ಶ್ರೀಮಂತರ ಮನೆಯಲ್ಲಿದೆ. ಆ ಕಲೆಯೇ ತಮಗೆ ರಕ್ತಗತವಾಗಿ ಬಂದಿದೆ ಎನ್ನುತ್ತಾರೆ. "ರಾಜ್ಯ ಪ್ರಶಸ್ತಿ," ಜಕಣಾಚಾರಿ" ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗರಿಗಳು ಕಾಶಿರವರ ಮುಡಿಲೇರಿದೆ. ಇಷ್ಟೆಲ್ಲಾ ಪ್ರಸಿದ್ದಿ ಪಡೆದಿದ್ದರೂ ಕಾಶಿಯ ಗುಣ ಸ್ವಲ್ಪ ಮಾತ್ರವೂ ಬದಲಾಗಿಲ್ಲ. ಇದೇ ಅಲ್ಲವೇ ತುಂಬಿದ ಕೊಡ ತುಳುಕುವುದಿಲ್ಲ ಎಂದರೆ.
ಉತಮಪಡಿಸ್ಲಾಗದ ಬರಹ
ಇನ್ನೂ ಉತ್ತಮವಾಗಬಹುದು
ಒಳ್ಳೆಯ ಬರಹ
ಚೆನ್ನಾಗಿದೆ!
ಉತ್ತಮ ಬರಹ!

No comments:

Post a Comment