Monday, June 28, 2010


ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು.
ಇವತ್ತು ನಾವು ಅರಣ್ಯ ಸಂಪತ್ತು ಹಾಳಾಗುತ್ತಿದೆ. ಗುಡ್ಡ ಬೆಟ್ಟಗಳೆಲ್ಲಾ ಹಾಳಾಗುತ್ತಿದೆ. ಇದು ಮುಂದಿನ ದಿನದ ಪರಿಸರ ನಾಶಕ್ಕೆ ನಾಂದಿ ಎಂದು ಎಲ್ಲರೂ ಚಿಂತಿಸುತ್ತಿದ್ದೇವೆ. ಹಾಗಾದರೆ ಇವತ್ತಿನ ಕೃಷಿ ಚಟುವಟಿಕೆ ಸರಿಯಾಗಿದೆಯಾ ಎನ್ನುವುದರ ಬಗ್ಗೆ ಕೂಡ ಚಿಂತನೆ ನಡೆಸಬೇಕಲ್ಲವೆ.




ಸಾಮಾನ್ಯವಾಗಿ ನೀರು ಹೆಚ್ಚಿನ ಮಟ್ಟದಲ್ಲಿ ಇರುವಂತವರು ತೋಟಕ್ಕೆ ಅಥವಾ ಭತ್ತದ ಬೆಳೆಗೆ ಮೊರೆ ಹೋಗುವುದನ್ನು ನಾವು ಕಂಡಿದ್ದೇವೆ. ಆದರೆ ಇದೀಗ ಪರಿಸ್ಥಿತಿ ಪೂರ್ಣ ಬದಲಾಗಿದೆ. ಯಾವಾಗ ಮೆಕ್ಕೆ ಜೋಳದ ಬೆಳೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿತು. ಹಾಗೇ ಇಂಡೋನೇಷಿಯಾ,ಸಿಂಗಪೂರ್,ಮಲೇಷಿಯಾದಂತಹ ದೇಶಗಳಿಗೆ ಮೆಕ್ಕೆಜೋಳ ರಫ್ತು ಆಗಲು ಆರಂಭಿಸಿತೋ ಜೋಳಕ್ಕೆ ಇನ್ನಿಲ್ಲದ ಬೇಡಿಕೆ ಆರಂಭವಾಯಿತು. ರೈತನಿಗೆ ನಿರೀಕ್ಷೆಗೂ ಮೀರಿದ ಹಣ ಸಿಗುವಂತಾಯಿತು. ಬಯಲುಸೀಮೆಗಳಲ್ಲಿ ಬೆಳೆಯುತ್ತಿದ್ದಂತಹ ಶೇಂಗಾ, ಸೂರ್ಯಕಾಂತಿ,ತೊಗರಿಗೆ ಹೆಚ್ಚಿನ ರೈತರು ಕಡಿವಾಣ ಹಾಕಿ ಮೆಕ್ಕೆ ಜೋಳಕ್ಕೆ ಮೊರೆ ಹೋದರು. ಹಾಗೇ ಅರೆ ಮಲೆನಾಡು ಪ್ರದೇಶಗಳಲ್ಲಿ ಭತ್ತ ಬೆಳೆಯುವ ಅವಕಾಶವಿದ್ದರೂ ಮೆಕ್ಕೆ ಜೋಳಕ್ಕೆ ಮೊರೆ ಹೋಗುತ್ತಿದ್ದಾರೆ. ಕಾರಣ ಕೇಳಿದರೆ ಎರಡು ಬಾರಿ ಗೊಬ್ಬರ ಹಾಕಿದರೆ ಸಾಕು ಹಾಗೇ ಒಮ್ಮೆ ಔಷಧಿ ಸಿಂಪಡಿಸಿದರೆ ಸಾಕು ಲಾಭ ನಿಶ್ಚಿತ. ಅದೇ ಭತ್ತ ಸೇರಿದಂತೆ ಇತರೆ ಬೆಳೆಗಳಿಗಾದರೆ ಆಗಾಗ ನೀರು ಹಾಯಿಸಬೇಕು,ಕಳೆ ತೆಗೆಸಬೇಕು.ಸಾಕಷ್ಟು ಖರ್ಚು. ಇದರ ಜೊತೆಗೆ ಭತ್ತದ ಬೆಲೆ ಯಾವಾಗ ಇಳಿಯುತ್ತದೋ ಎನ್ನುವ ಆತಂಕದ ವಿಷಯ ಎನ್ನುತ್ತಾರೆ. ಮೆಕ್ಕೆಜೋಳ ಎಂದಾಕ್ಷಣ ಡಿ.ಎ.ಪಿ ಮತ್ತು ಯೂರಿಯಾ ಗೊಬ್ಬರಗಳು ಅತೀ ಅವಶ್ಯ. ಕಳೆದ ವರ್ಷ ಹಾವೇರಿ ಗೋಲಿಬಾರ್ ಗೆ ಕಾರಣವಾದದ್ದು ಇದೇ ಡಿ.ಎ.ಪಿ., ಮೆಕ್ಕೆ ಜೋಳ ಎಂಬ ಬೆಳೆ ತನ್ನ ಸುತ್ತಮುತ್ತಲಿನ ಪ್ರದೇಶದ ನೀರನ್ನು ಸಾಕಷ್ಟು ಹೀರಿಕೊಳ್ಳುತ್ತದೆ. ಪದೇ, ಪದೇ ಇದೇ ಬೆಳೆಯನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದು ನಿಶ್ಚಿತ. ಹಾಗೇ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ. ಅದಕ್ಕಾಗಿ ರೈತ ಒಂದು ಚೀಲ ರಾಸಾಯನಿಕ ಗೊಬ್ಬರ ಸುರಿಯುವ ಕಡೆ ಎರಡು ಚೀಲ ಸುರಿಯುತ್ತಾನೆ. ಇದು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಕೃಷಿ ತಜ್ಞರು ಪ್ರತೀ ವರ್ಷ ಬೆಳೆಯನ್ನು ಬದಲಾಯಿಸಿ ಎನ್ನುತ್ತಾರೆ. ಹಾಳಾದ ಹಣದ ಆಸೆ ಹಾಗೂ ಮೈ ಜಡ್ಡುಗೂಡಿದ ಪರಿಣಾಮ ಮೆಕ್ಕೆಜೋಳಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಒಂದು ಮೆಕ್ಕೆಜೋಳದ ತೆನೆ ತಿಂದರೆ ದೇಹಕ್ಕೆ 5ಗ್ರಾಂ.ನಷ್ಟು ರಾಸಾಯಾನಿಕ ಗೊಬ್ಬರ ಹೋಗಿರುತ್ತದೆ. ಹಾಗೇ ಬರಬರುತ್ತಾ ಭೂಮಿ ಬರಡಾಗುತ್ತದೆ. ಮುಂದಿನ ದಿನಗಳಲ್ಲಿ ಆ ಭೂಮಿಯಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಇದರ ಬಗ್ಗೆ ಹಲವಾರು ಜಾಗೃತಿಕ ಕಾರ್ಯಕ್ರಮಗಳು ನಡೆದಿದೆಯಾದರೂ ವರ್ಷದಿಂದ ವರ್ಷಕ್ಕೆ ಮೆಕ್ಕೆ ಜೋಳದ ಬೆಳೆ ಮಾತ್ರ ಹೆಚ್ಚಾಗುತ್ತಿದೆ. ಪ್ರತೀ ವರ್ಷ ಗುಡ್ಡ ಸಮತಟ್ಟು ಮಾಡುವುದು, ಅರಣ್ಯ ನಾಶ ಮಾಡಿ ಮೆಕ್ಕೆ ಜೋಳ ಹಾಕುವುದು ಸಾಕಷ್ಟು ರೈತರ ಅಭ್ಯಾಸವಾಗಿದೆ. ಅರಣ್ಯ ಇಲಾಖೆಯವರ ಕಠಿಣ ಕ್ರಮಕ್ಕೆ ಮುಂದಾದರೆ ಜನಪ್ರತಿನಿಧಿಗಳ ಅಡ್ಡಗಾಲು. ಇದೊಂದು ಗೊತ್ತಿರದ ದೊಡ್ಡ ಸಮಸ್ಯೆ. ಇದು ನಿಶ್ಚಿತವಾಗಿ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ಭತ್ತ ಬೆಳೆಯುವವರು ಕೂಡ ಮೆಕ್ಕೆ ಜೋಳ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಕೇರಳಿಯನ್ನರ ಹಾವಳಿಯಿಂದಾಗಿ ಹಾವೇರಿ,ದಾವಣಗೆರೆ,ರಾಯಚೂರು,ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಇದೂ ಕೂಡ ಭೂಮಿಗೆ ಮಾರಕ. ಕೇರಳಿಯನ್ನರು ನೀಡುವ ಸ್ವಲ್ಪ ಹಣದ ಆಸೆಗೆ ತನ್ನ ಭೂಮಿ ನೀಡುತ್ತಿರುವ ರೈತ ಮುಂದೊಂದು ದಿನ ನಿಶ್ಚಿತವಾಗಿ ಪರೆದಾಡುತ್ತಾನೆ.

No comments:

Post a Comment