Monday, June 28, 2010

ಹೀಗೊಂದು ದೆವ್ವದ ಕಥೆ - ಹೆದರಬೇಡಿ

ನಮ್ಮದು ವಟಾರದ ಮನೆ. ಅಕ್ಕಪಕ್ಕದಲ್ಲಿ ಇರುವವರೆಲ್ಲಾ ಚಿಕ್ಕಪ್ಪ ದೊಡ್ಡಪ್ಪಂದಿರು. ಎಲ್ಲರೂ ಓಡಾಡುವುದಕ್ಕೆ ಓಣಿ ಇದೆ. ಇಲ್ಲಿ ದೊಡ್ಡಪ್ಪ ಕಟ್ಟಿಗೆ ಹಾಕಿದ್ದಾರೆ. ನಾವೊಂದಿಷ್ಟು ಗಿಡಗಳನ್ನು ಹಾಕಿದ್ದೇವೆ. ಮುಂದೆ ದೊಡ್ಡ ಬಾವಿ ಇದೆ. ಹತ್ತಾರು ವರ್ಷಗಳ ಹಿಂದೆ ಇದರಲ್ಲಿ ಕೆಲವರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ಮ ಬದುಕಿದ್ದಾಗ, ನಮ್ಮಲ್ಲಿ ಚಂಡಿ ಸಾಕಿದೀವಿ. ಅದು ಬೀಳೆ ಸೀರೇ ಉಡ್ಕೊಂಡು ರಾತ್ರಿಯೆಲ್ಲಾ ಓಡಾಡುತ್ತೆ. ಹಾಗೇ ನಿಮ್ಮ ದೊಡ್ಡಪ್ಪ ಸಾಯುವಾಗ ಅವರ ಇನ್ನೂ ಆಸೆ ತೀರಲಿಲ್ಲ. ಅವರೂ ಓಡಾಡುವ ಸಾಧ್ಯತೆ ಇದೆ. ಬಾವಿಯಲ್ಲಿ ಬಿದ್ದಿರೋರು ದೆವ್ವಾ ಆಗಿರೋ ಅವಕಾಶಗಳು ಹೆಚ್ಚು. ಹಂಗೆಲ್ಲಾ ರಾತ್ರಿ ಹೊತ್ತು ಹೊರ ಹೋಗಬೇಡ ಅನ್ನುತ್ತಿದ್ದಳು.

ಇವನೆಲ್ಲಿ ಎದ್ದು ಹೋಗ್ತಾನೆ ಅಂತಾನೋ, ಅಥವಾ ಏನಾದರೂ ಹೆದರು ಬಿಟ್ಟರೆ ಅನ್ನುವುದಕ್ಕೆ ಅಮ್ಮ ನುಡಿದಿರಬೇಕು. ರಾತ್ರಿ ಸಮಯ ಯಾವುದಾದರೂ ಪತ್ರಿಕೆ,ಪುಸ್ತಕ, ಬೇಜಾರು ಆಯ್ತೆಂದರೆ ಸಣ್ಣ ಧ್ವನಿಯಲ್ಲಿ ಸುಮಾರು ರಾತ್ರಿ 2ರವರೆಗೆ ಟಿವಿ ನೋಡೋ ಹವ್ಯಾಸವಾಗಿ ಬಿಟ್ಟಿದೆ. ಏನೂ ಇಲ್ಲಾ ಅಂದ್ರೆ ಯಾವುದಾದರೂ ವಿಷಯದ ಮೇಲೆ ರಾತ್ರಿಯಲ್ಲಿ ಬರೆಯುವುವ ಹವ್ಯಾಸ. ಈ ಸಮಯದಲ್ಲಿ ಮನೆಯೆಲ್ಲಾ ನಿಶ್ಯಬ್ದವಾಗಿರುತ್ತದೆ. ಇದ್ದಕ್ಕಿದ್ದಂತೆ ಓಣಿಯಲ್ಲಿ ಧಡಾ,ಧಡಾ ಅಂತಾ ಓಡಾಡುವ ಶಬ್ದ. ಆ ನಂತರ ಆ ಕಡೆಯಿಂದ ಈ ಕಡೆಗೆ ಓಡಿ ಹೋದಂತಾಗುವುದು. ಸ್ವಲ್ಪ ಹೊತ್ತು ಮತ್ತೆ ನಿಶ್ಯಬ್ದವಾದ ಮೇಲೆ. ಗಲ್,ಗಲ್ ಆಗ್ತಾ ಇತ್ತು. ಇತ್ತೀಚೆಗೆ ನನ್ನ ಹೆಂಡ್ತಿಗೆ ಹೇಳಿದೆ. ಏನು ಇದು ಅಂತಾ. ಹಂಗೆಲ್ಲಾ ಬಾಗಿಲು ತೆಗೆದು ಹೋಗಬೇಡ್ರಿ. ಯಾಕ್ ಬೇಕು ರಿಸ್ಕ್ ಅಂತಾ.

ಆದ್ರೆ ಕುತೂಹಲ ಅನ್ನುವುದು ಯಾರ ಅಪ್ಪನ ಮನೆಯದು.ಇದು ಏನೂಂತ ನೋಡಲೇಬೇಕು. ಕೆಲ ದಿನಗಳ ಹಿಂದೆ ಮತ್ತೆ ಇದೇ ಅನುಭವವಾಯ್ತು. ತಕ್ಷಣ ಹೊರಗಡೆ ದೀಪಹಾಕಿ ಬಾಗಿಲು ತೆಗದ್ರೆ ಯಾರೂ ಇಲ್ಲ. ಬಂದು ಒಳಕೂತೆ ಮತ್ತೆ ನಿಶ್ಯಬ್ದ. ಗಲ್,ಗಲ್ ಸೌಂಡ್. ಸ್ವಲ್ಪ ಮನಸಿಗೆ ಕಸಿವಿಯಾಯಿತು. ಇದು ಏನು ಅಂತಾ ನೋಡ್ಲೇ ಬೇಕಾಲ್ಲಾ ಅಂತಾ. ಮೊನ್ನೆ ರಾತ್ರಿ 12 ಆಗ್ತಿದ್ದಂಗೆ. ಬಾಗಿಲಿಗೆ ಚಿಲಕ ಹಾಕದೆ ಕಾಯ್ತಾ ಇದ್ದೆ. ಓಡಾಡುವ ಶಬ್ದ ಬಂತು. ಬಾಗಿಲು ತಕ್ಷಣ ತೆಗದರೆ, ಬಡ್ಡೀ ಮಗಂದು ಪಕ್ಕದ ಮನೆ ಹಸು ಗಿಡ, ಎಸೆದಿರೋ ತರಕಾರಿ ಸಿಪ್ಪೆ ತಿನ್ನೋಕೆ ಬಂದಿತ್ತು. ಸಮ್ನೆ ಒಳ ಬಂದೆ. ಮತ್ತೆ ಧಡಾ, ಧಡಾ ಅಂತಾ ಶಬ್ದ, ಬಾಗಿಲು ತೆಗೆದರೆ ಹೆಗ್ಗಣ ಧಿಡೀರ್ ಅಂತಾ ಬಂದರೆ ಹಸು ಓಡಿ ಹೋಗ್ತಾ ಇತ್ತು. ಹೊರಗಡೆ ಕತ್ತಲು ಇದ್ದುದರಿಂದ ಅದು ಕಟ್ಟಿಗೆ ಹಿಂದೆ ನಿಂತರೆ ಕಾಣ್ತಾನೇ ಇರ್ಲಿಲ್ಲ. ಓಹ್ ಅಂತು ಸಂಶೋಧನೆ ಮಾಡ್ದೆ ಅಂತಾ ಖುಷಿಯಾಗಿ ಒಳ ಬಂದು ಇದನ್ನು ಬೆಳಗ್ಗೆ ನನ್ನ ಹೆಂಡ್ತಿಗೆ ಹೇಳಬೇಕು ಅಂತಾ ಪುಸ್ತಕ ಓದುತ್ತಾ ಕೂತೆ.

ಆದರೆ ಗಲ್,ಗಲ್ ಶಬ್ದ ಮಾತ್ರ ಬರ್ತಾನೆ ಇತ್ತು. ಹೊರಗೆ ಹೋಗಿ ಎಲ್ಲಾ ನೋಡಿದ್ರೂ ಏನೂ ಇಲ್ಲ. ಕೊನೆಗೆ ಒಳ ಹೋಗಿ ನೋಡಿದ್ರೆ. ನೀರಿನ ಫಿಲ್ಟರ್ ನ್ನ ಸ್ಟೂಲ್ ಮೇಲೆ ಇದೆ. ಅದರಿಂದ ಬೀಳೋ ಒಂದಂದು ಹನಿ ಮನೆಯೆಲ್ಲಾ ನೀರಾಗುತ್ತೆ ಅಂತಾ ಕಳಗೆ ಒಂದು ಖಾಲಿ ಪಾತ್ರೆ ಇಡುವುದು ಅಭ್ಯಾಸ. ನೀರು ಮೇಲಿಂದ ಪಾತ್ರೆಯೊಳಗೆ ಬಿದ್ದಾಗಲೆಲ್ಲಾ ಈ ರೀತಿ ಶಬ್ದ ಕೇಳಿಸ್ತಾ ಇತ್ತು. ಅಂತೂ ಒಂದು ಹಲವು ದಿನಗಳ ಭಯ ಮತ್ತು ಕುತೂಹಲಕ್ಕೆ ಅಂತ್ಯ ಸಿಕ್ಕಿತಲ್ಲಾ ಅಂತಾ ಖುಷಿಯಾದೆ. ಅವಳಿಗೂ ಹೇಳಿದೆ. ಹೌದಾ. ನಾನೂ ಹಂಗೇ ಅನ್ಕಂಡಿದ್ದೆ ಅಂದ್ಲು.

No comments:

Post a Comment