Saturday, September 11, 2010

ಹದಗೆಟ್ಟ ರಾಜಕೀಯ ವ್ಯವಸ್ಥೆ


ರಾಜಕೀಯ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎನ್ನುವುದಕ್ಕೆ ಕಡೂರು ಮತ್ತು ಗುಲ್ಬರ್ಗದ ಉಪ ಚುನಾವಣೆ ಮತ್ತೊಂದು ಉದಾಹರಣೆಯಾಗಿದೆ. ಹಣ, ಹೆಂಡ ಇಲ್ಲದೆ ಚುನಾವಣೆಯೆ ಇಲ್ಲವೇ ಎನ್ನುವಂತೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವುದು ಕೇವಲ ಸಾಂಕೇತಿಕವಾಗಿ ಉಳಿದಂತಿದೆ. ಅಕ್ರಮಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದರೂ ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ನಮಗೆ ಯಾಕೆ ಬೇಕು. ದಿನ ನಿತ್ಯ ಈ ಚುನಾವಣೆಗೆಂದೇ ಪತ್ರಿಕೆಗಳಲ್ಲಿ ಅರ್ಧ ಪೇಜ್ ಲೇಖನ ಬೇರೇ. ಜನ ಸಾಮಾನ್ಯನಿಗೆ ಬೇಕಾ ಈ ಚುನಾವಣೆ. ಮತ್ತದೇ ಕೆಸರೆರಾಚಾಟ. ಪಡಿತರ ಕಾರ್ಡ್ ಇಲ್ಲದೆ ಜನ ಪರೆದಾಡುತ್ತಿದ್ದಾರೆ. ನೆರೆ ಸಂತ್ರಸ್ತರು ದಿನ ನಿತ್ಯ ಅಳುತ್ತಿದ್ದಾರೆ. ನಿರುದ್ಯೋಗಿಗಳು ಕೆಲಸ ವಿಲ್ಲದೆ ಪರೆದಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು ಹೊರಬಂದು ಪರೆದಾಡುತ್ತಿದ್ದಾರೆ.

ಈ ರೀತಿ ಆಟಗಳು ಆಡಲೆಂದಾ ನಾವು ಇವರನ್ನು ಆಯ್ಕೆ ಮಾಡಿ ಕಳಿಸಿರುವುದು. ಇವರಿಗೆ ಕನಿಷ್ಟ ಮಟ್ದದ ಜವಾಬ್ದಾರಿಯಾದರೂ ಇದೆಯಾ. ಹಾಗಾದರೆ ಪ್ರಣಾಳಿಕೆ ಎಂದರೆ ಏನು? ಇದನ್ನು ಅವರು ಯೋಚಿಸುತ್ತಾರಾ ಖಂಡಿತಾ ಇಲ್ಲ. ಕಾರಣ ಸ್ವಾರ್ಥ. ನಾವು ಮತ್ತು ನಮ್ಮ ಕುಟುಂಬ,ಬೆಂಬಲಿಗರು ಬದುಕಿದರೆ ಸಾಕು. ಇದೀಗ ಪ್ರತಿಯೊಂದು ಚುನಾವಣೆಗೂ ಅಭ್ಯರ್ಥಿಯ ಬಳಿ ಹಣ ಇಲ್ಲದೇ ಹೋದರೆ ಠೇವಣಿಯೂ ಸಿಗುವುದಿಲ್ಲ ಎನ್ನುವ ಮಾತಿದೆ. ಗ್ರಾ.ಪಂಗೆ 3ಲಕ್ಷ, ತಾ.ಪಂಗೆ 5ಲಕ್ಷ ಇನ್ನೂ ಜಿ.ಪಂಗೆ 10ಲಕ್ಷ, ವಿಧಾನಸಭೆಗೆ 2ಕೋಟಿ, ಲೋಕಸಭೆಗೆ 50ಕೋಟಿ. ಇದು ನಿಗದಿ ಪಡಿಸಿದ ಮೊತ್ತವಾಗಿದೆ. ಅಭ್ಯರ್ಥಿಯ ಬಳಿ ಜನ ಬೆಂಬಲವಿಲ್ಲದೇ ಹೋದರೂ ಹಣವಿದ್ದರೆ ಟಿಕೆಟ್ ಪಕ್ಷದ ಗ್ಯಾರಂಟಿ. ಇದಕ್ಕೂ ಲಂಚ.
ಈ ಮುಂಚೆ ಜನಪ್ರತಿನಿಧಿಗಳು ಎಂದರೆ ಸಾಮಾನ್ಯರ ಸಮಸ್ಯಗೆ ಸ್ಪಂದಿಸುವವರು ಎನ್ನುವ ಮಾತಿತ್ತು. ಆದರೆ ಇದೀಗ ಪಕ್ಷ ಉಳಿಸುವುದಕ್ಕೆ, ಅಧಿಕಾರ ಉಳಿಸಿಕೊಳ್ಳುವುದಕ್ಕೆ ಎಂಬಂತಾಗಿದೆ. ಯಡಿಯೂರಪ್ಪನವರು ಸಂಪುಟ ಪನರ್ ರಚನೆಯಲ್ಲಿ ಸೋಮಣ್ಣ ಹಾಗೂ ಶೋಭಾರವರನ್ನು ತೆಗೆದುಕೊಳ್ಳಬೇಕೆಂದರೆ ಈ ಎರಡು ಉಪ ಚುನಾವಣೆಗಳನ್ನು ಗೆಲ್ಲಲೇಬೇಕು. ಅದಕ್ಕೆಂದು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.ಜಾತಿವಾರು ಸಭೆಗಳಿಗೆ ಲೆಕ್ಕವೇ ಇಲ್ಲ. 100 ಓಟಿದ್ದರೆ 5ಲಕ್ಷ, 400 ಓಟಿದ್ದರೆ 40ಲಕ್ಷ ಈ ರೀತಿ ಮತಗಳು ಹಂಚಿಕೆಯಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದು ಕೇವಲ ಬಿಜೆಪಿ ಮಾತ್ರವಲ್ಲದೆ ಸಿದ್ದಾಂತ ಎನ್ನುವ ಜೆಡಿಎಸ್ ಹಾಗೂ ಕಾಂಗ್ರೆಸ್ ಕೂಡ ಇಂತಹ ಅಕ್ರಮಕ್ಕೆ ಮುಂದಾಗಿದೆ. ಪಕ್ಷಗಳ ಮುಖಂಡರುಗಳ ಹೊತ್ತ ಜೆರ್ಕಿನ್ ಗಳು, ಟೋಪಿಗಳು ಇನ್ನಿಲ್ಲದಂತೆ ಹಂಚಲಾಗುತ್ತಿದೆ. ಹೆಂಗಳೆಯರ ಪಕ್ಷ ಬಿಜೆಪಿ ಇನ್ನಿಲ್ಲದಂತೆ ಗೌರಿ ಬಾಗಿನದ ಜೊತೆಗೆ ಸೀರೆ, ಹಣ ರಾಜಾರೋಷವಾಗಿ ನೀಡುತ್ತಿದೆ. ಇದಕ್ಕೆ ನಾವೇನೂ ಕಡಿಮೆ ಇಲ್ಲ ಎಂಬಂತೆ ಉಭಯ ಪಕ್ಷಗಳು ಹಣ ಹಂಚಿಕೆಯಲ್ಲಿ ಹಿಂದುಳಿದಿಲ್ಲ. ಒಟ್ಟಾರೆಯಾಗಿ ಇವರೆಡೂ ಕ್ಷೇತ್ರದ ಕೆಲಸವಿಲ್ಲದ ಜನ ಸದ್ಯಕ್ಕೆ ಮಾತ್ರ ಖುಷಿಯಾಗಿದ್ದಾರೆ.
ಇದೀಗ ಸತ್ಯದ ಬಗ್ಗೆ ಪರಾಮರ್ಶಿಸೋಣ, ಇವರೆಡೂ ಕ್ಷೇತ್ರದಲ್ಲಿ ಗೆದ್ದಂತವರು ಏನು ಮಾಡುತ್ತಾರೆ ಎಂದು ಯೋಚಿಸಿದರೆ ಮತ್ತೆ ಅದೇ ಉತ್ತರ ಏನೂ ಇಲ್ಲ. ಹಾಗಾದರೆ ಇಷ್ಟೆಲ್ಲಾ ಕಸರತ್ತು ಯಾಕೆಂದರೆ ಸ್ವಾರ್ಥ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕನಸು ಕನಸಾಗಿಯೇ ಉಳಿದಿದೆ. ಇಲ್ಲಿನ ಸಾಕಷ್ಟು ಸಮಸ್ಯೆ ಇದ್ದರೂ ಈವರೆಗೆ ಬಗೆಹರಿಸದ ರಾಜಕಾರಣಿಗಳು ಇದೀಗ ಭರವಸೆಯ ಸುರಿಮಳೆ ಹರಿಸುತ್ತಿದ್ದಾರೆ. ಬುದ್ದಿವಂತರು ಎನ್ನುವರು ಓಟು ಮಾಡುವುದೇ ಇಲ್ಲ. ಈ ಸತ್ಯ ಬಿಬಿಎಂಪಿ ಚುನಾವಣೆಯಲ್ಲಿ ಪ್ರೂವ್ ಆಗಿದೆ. ಯಾವುದೋ ಗಣಿ ಹಗರಣದ ಬಗ್ಗೆ ಮಾತನಾಡುವ ಇವರಿಗೆ ಸಾಮಾನ್ಯನ ಕಷ್ಟ ಗೊತ್ತಿದೆಯಾ. ಖಂಡಿತಾ ಇಲ್ಲ. ಬಿಜೆಪಿ ಗೆದ್ದರೆ ಯಡಿಯೂರಪ್ಪನವರಿಗೆ ಮತ್ತೊಂದು ಗರಿ. ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸೋನಿಯಾಗೆ ಹತ್ತಿರ. ಜೆಡಿಎಸ್ ಗೆದ್ದರೆ ಮತ್ತದೇ ನೈಸ್,ಗಣಿ ವಿವಾದಕ್ಕೆ ಮುಂದಾಗುವುದು. ಪ್ರತಿಯೊಂದು ತಾಲ್ಲೂಕಿನಿಂದಲೂ ಜಾತಿವಾರು ಮುಖಂಡರುಗಳು ಇವೆರಡೂ ಕ್ಷೇತ್ರಗಳಿಗೆ ತೆರಳಿದ್ದಾರೆ. ಅವರುಗಳ ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೇಳಿದರೆ ನಮ್ಮ ಕೆಲಸಗಳು ಸುಲಭವಾಗುತ್ತದೆ ಎನ್ನುತ್ತಾರೆ. ಇಂತಹ ಚುನಾವಣೆಗಳು ನಮಗೆ ಬೇಕಾ. ಅನುಕಂಪದ ಆಧಾರದ ಮೇಲೆ ಓಟು ಕೇಳುವುದು, ಹಣದ ಆಧಾರದಲ್ಲಿ ಓಟು ಕೇಳುವುದು ಇವೆಲ್ಲಾ ಸಾಮಾನ್ಯವೆನ್ನುವುದಾದರೆ ನೇರವಾಗಿ ಅಭ್ಯರ್ಥಿಯನ್ನು ಕೋಟಿ ಆಧಾರದ ಮೇಲೆ ಆರಿಸುವುದು ಉತ್ತಮ. ಅಧಿಕಾರಿಗಳ ಸಮಯ, ಪತ್ರಿಕೆಗಳ ಜಾಗವಾದರೂ ಉಳಿಯುತ್ತದೆ.ಅಲ್ಲವಾ.

No comments:

Post a Comment