Saturday, September 11, 2010

೧೯೪೭ರ ಸ್ವಾತಂತ್ರ್ಯದ ಸೂರ್ಯನ ನೋಡಲು ಸುಭಾಷರು ‘ಬದುಕಿದ್ದರಾ!?’



ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು ‘ಮಹಾತ್ಮ ಗಾಂಧಿಜಿ’ಯವರನ್ನು.ಮಹಾತ್ಮರ ಸಲಹೆಯಂತೆ ‘ದೇಶ ಬಂಧು’ ಚಿತ್ತರಂಜನ ದಾಸ್ರವರೊಂದಿಗೆ ಭಾರತದ ಸ್ವಾತಂತ್ಯ್ರ ಹೋರಾಟಕ್ಕೆ ಧುಮುಕಿ ಮುಂದಿನ ೨೫ ವರ್ಷಗಳಲ್ಲಿ , ೪೦೦೦೦ -೪೫೦೦೦ ಜನರ ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಮುನ್ನಡೆಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’.


ಬೋಸರು ೧೮೯೭ರ ಜನವರಿ ೨೩ ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ ೪ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.

೧೯೩೮ ರಲ್ಲಿ ನಡೆದ ೫೧ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.೧೯೩೯ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸುಭಾಷರು ತೀರ್ಮಾನಿಸಿದರು.ಅಲ್ಲಿಯವರೆಗೂ ಕಾಂಗ್ರೆಸ್ಸಿನಲ್ಲಿ ಗಾಂಧೀಜಿ ಸೂಚಿಸಿದವರೆ ಅಧ್ಯಕ್ಷರಾಗುತಿದ್ದರು, ಆದರೆ ಸುಭಾಷರ ಈ ತೀರ್ಮಾನ ಗಾಂಧೀಜಿ ಹಾಗೂ ಅವರ ಅನುಯಾಯಿಗಳಿಗೆ ಸಹ್ಯವಾಗಲಿಲ್ಲ.ಆದರೆ ಯಾವುದೇ ವೈಯುಕ್ತಿಕ ಹಿತಾಸಕ್ತಿಗಳಿಲ್ಲದೆ ಕೇವಲ ದೇಶದ ಹಿತಾಸಕ್ತಿಗಾಗಿ ನಿರ್ಧಾರದಿಂದ ಸುಭಾಷರು ಹಿಂದೆ ಸರಿಯಲಿಲ್ಲ ,ಅಂತಿಮವಾಗಿ ಗಾಂಧೀಜಿ ಬೆಂಬಲಿತ ‘ಪಟ್ಟಾಭಿ ಸೀತಾರಾಮಯ್ಯ’ ಹಾಗೂ ‘ಸುಭಾಷ್’ರ ನಡುವೆ ನೇರ ಹಣಾಹಣಿ ನಡೆದು,ಚುನಾವಣೆಯಲ್ಲಿ ಸುಭಾಷರು ಜಯಶಾಲಿಯಾದರು.

ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಗಾಂಧೀಜಿ “ಇದು ಪಟ್ಟಾಭಿಯವರ ಸೋಲಲ್ಲ ,ಬದಲಿಗೆ ನನ್ನದೇ ಸೋಲು.ಇಂದು ಹಿಂದೆ ಮುಂದೆ ಅರಿಯದೆ ಈ ಜನ ಅವರನ್ನು ಬೆಂಬಲಿಸಿದ್ದಾರೆ.ಯಾರಿಗೆ ಕಾಂಗ್ರೆಸ್ಸಿನಲ್ಲಿರುವುದು ಅಹಿತಕರವೆನ್ನಿಸುವುದೋ ಅವರು ಬೇರೆ ದಾರಿ ನೋಡಿಕೊಳ್ಳಬಹುದು” ಅಂತ ವೈಯುಕ್ತಿಕ ಮಟ್ಟದ ಹೇಳಿಕೆ ನೀಡಿಬಿಟ್ಟರು.ಮುಂದೆ ಕಾಂಗ್ರೆಸ್ಸ್ ಕಾರ್ಯಕಾರಿಣಿಯ ಸದಸ್ಯರ ನೇಮಕಾತಿ ವಿಷಯದಲ್ಲಿ ನಡೆದ ರಾಜಕೀಯದಿಂದಾಗಿ ಮನ ನೊಂದ ಸುಭಾಷರು ಕಾಂಗ್ರೆಸ್ಸ್ ತೊರೆದು ‘ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದರು.

ಫಾರ್ವರ್ಡ್ ಬ್ಲಾಕ್ನ ಮೂಲಕವೇ ತಮ್ಮ ಹೋರಾಟ ಮುಂದುವರೆಸಿದ ಸುಭಾಷರನ್ನು ೧೯೪೧ ರಲ್ಲಿ , ಬ್ರಿಟಿಷ್ ಸರ್ಕಾರ ೧೧ನೆ ಹಾಗೂ ಕಡೆಯ ಬಾರಿಗೆ ಬಂಧಿಸಿತು, ಸುಭಾಷರ ಆರೋಗ್ಯ ಸರಿಯಿಲ್ಲವಾಗಿದ್ದರಿಂದಾಗಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯ್ತು.ಹಾಗೆ ಗೃಹ ಬಂಧನದಲ್ಲಿರುವಾಗಲೇ ಸುಭಾಷರು ಯಾರು ಊಹಿಸದ ಯೋಜನೆ ಮಾಡಿಬಿಟ್ಟಿದ್ದರು.ಗೃಹ ಬಂಧನದಿಂದ ತಪ್ಪಿಸಿಕೊಂಡ ಸುಭಾಷರು ಹೋಗಿ ತಲುಪಿದ್ದು ಜರ್ಮನಿ!.

ಅಲ್ಲಿಂದ ಮುಂದೆ ಶುರುವಾಗಿದ್ದೆ ಭಾರತ ಸ್ವಾತಂತ್ಯ್ರ ಚಳುವಳಿಯ ರೋಚಕ ಇತಿಹಾಸ ಅದೇ ‘ಐ.ಎನ್.ಎ’ ಅಭಿಯಾನ.ಜಪಾನ್ನಲ್ಲಿ ಶುರುವಾದ ಸುಭಾಷರ ಈ ಅಭಿಯಾನವೇ,ಭಾರತದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳುವಳಿ ಆರಂಭವಾಗುವಂತೆ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದು .

ಅದು ಎರಡನೇ ಮಹಾಯುದ್ಧದ ಕಾಲ.ಜರ್ಮನಿ,ಜಪಾನ್ ಒಂದು ಬಣದ ನೇತೃತ್ವ ವಹಿಸಿದ್ದರೆ,ಅಮೆರಿಕ,ಬ್ರಿಟನ್,ರಷ್ಯ ಇನ್ನೊದು ಬಣದಲ್ಲಿದ್ದವು.ನಮ್ಮ ಸ್ವಾತಂತ್ಯ್ರ ಹೋರಾಟಕ್ಕೆ ಬೆಂಬಲ ನೀಡಿದ್ದು ಹಿಟ್ಲರನ ಜರ್ಮನಿ, ಟೋಜೊನ ಜಪಾನ್.ಅದರಲ್ಲೂ ಜಪಾನಿಯರ ಸಹಾಯ ಬಹಳ ದೊಡ್ಡ ಮಟ್ಟದಲ್ಲಿತ್ತು.ಸುಭಾಷರನ್ನು ಅವರು ನಡೆಸಿಕೊಂಡಷ್ಟು ಗೌರವಯುತವಾಗಿ ಭಾರತವೇ ನಡೆಸಿಕೊಂಡಿಲ್ಲ ಅಂದರು ತಪ್ಪಿಲ್ಲವೇನೋ. ಜರ್ಮನಿ ಸರ್ಕಾರದ ಸಹಾಯದಿಂದ ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ “ನಾನು ಸುಭಾಷ್ ಮಾತಾಡುತಿದ್ದೇನೆ , ಇನ್ನು ಬದುಕಿದ್ದೇನೆ!” ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಕ್ರಾಂತಿಕಾರಿಗಳಲ್ಲಿ ಹೋರಾಟ ಉತ್ಸಾಹ ನೂರ್ಮಡಿಯಾಗಿತ್ತು.

೧೯೪೩ರ ಅಕ್ಟೋಬರ್ ೨೩ರಂದು ಸುಭಾಷರು ಜಪಾನ್ನಲ್ಲಿ ಸ್ವತಂತ್ರ ಭಾರತದ ‘ಹಂಗಾಮಿ ಸರ್ಕಾರ’ವನ್ನು ಸ್ಥಾಪಿಸಿ ‘ಮೊದಲ ಪ್ರಧಾನ ಮಂತ್ರಿ’ಯಾದರು , ಆ ಸರ್ಕಾರಕ್ಕೆ ಅಗತ್ಯವಾಗಿದ್ದ ಆಡಳಿತ ವ್ಯವಸ್ಥೆಯನ್ನು ಮಾಡಿದ್ದರು.ಅತಿ ಕಡಿಮೆ ಸಮಯದಲ್ಲೇ ನಾಣ್ಯ ವ್ಯವಸ್ಥೆ,ಸಂವಿಧಾನ ಎಲ್ಲವನ್ನು ಮಾಡಲಾಗಿತ್ತು ಅಂದರೆ ಸುಭಾಷರ ದೂರದರ್ಶಿ ವ್ಯಕ್ತಿತ್ವ ಹಾಗೂ ಅದೆಷ್ಟು ವೇಗವಾಗಿ ಕೆಲಸ ಮಾಡುತಿದ್ದರು ಎಂಬುದು ತಿಳಿಯುತ್ತದೆ ಮತ್ತು ಆ ಹಂಗಾಮಿ ಸರ್ಕಾರಕ್ಕೆ ‘ಜರ್ಮನಿ,ಜಪಾನ್,ಚೀನಾ,ಸಿಂಗಾಪುರ’ ಸೇರಿದಂತೆ ಇನ್ನು ಹಲ ರಾಷ್ಟ್ರಗಳು ಮಾನ್ಯತೆ ನೀಡಿದ್ದವು. ಹಂಗಾಮಿ ಸರ್ಕಾರ ಸ್ಥಾಪನೆಯಾದ ಕೆಲ ದಿನಗಳಲ್ಲೇ ಸುಭಾಷರು ಅಧಿಕೃತವಾಗಿ ‘ಮಿತ್ರ ಕೂಟ’ಗಳ (ಅದೇಕೆ ‘ನಮ್ಮ’ ಇತಿಹಾಸದಲ್ಲೂ ಇವರು ‘ಮಿತ್ರ’ರೋ?) ಮೇಲೆ ಯುದ್ಧ ಘೋಷಿಸಿದರು.ಆಗ ಶುರುವಾಗಿದ್ದೆ ‘ಐ.ಎನ್.ಎ’ ಅಭಿಯಾನ.

ಸುಭಾಷರು ‘ಐ.ಎನ್.ಎ’ ಸ್ಥಾಪಿಸಿದರು ಅಂತಲೇ ಓದಿಕೊಂಡು ಬಂದವರಿಗೆ, ಬಹುಷಃ ಈ ‘ಐ.ಎನ್.ಎ’ಯನ್ನು ಹುಟ್ಟು ಹಾಕಿದ್ದು ಮತ್ತೊಬ್ಬ ಹಿರಿಯ ಕ್ರಾಂತಿಕಾರೀ ‘ರಾಸ್ ಬಿಹಾರಿ ಬೋಸ್’ ಎಂಬುದು ತಿಳಿದಿರಲಿಕ್ಕಿಲ್ಲ. ಸುಭಾಷರು ಸ್ಥಾಪಿಸಿದ್ದು ‘ಇಂಡಿಯಾ ಲಿಜಾನ್’ ಅನ್ನುವ ಸಂಘಟನೆ. ರಾಸ್ ಬಿಹಾರಿ ಬೋಸರು ನಂತರ ಸುಭಾಷರ ಸುಪರ್ಧಿಗೆ ‘ಐ.ಎನ್.ಎ’ ಅನ್ನು ಹಸ್ತಾಂತರಿಸಿದರು. ಯುದ್ಧ ಶುರುವಾದ ಕೆಲ ದಿನಗಳಲ್ಲೇ ಜಪಾನಿ ಪಡೆ ‘ಅಂಡಮಾನ್ ಹಾಗೂ ನಿಕೋಬಾರ್’ ದ್ವೀಪಗಳನ್ನು ವಶಪಡಿಸಿಕೊಂಡಿತು.ಸುಭಾಷರು , ಟೋಜೋನೊಂದಿಗೆ ಮಾತಾಡಿ ಅವೆರಡನ್ನು ‘ಐ.ಎನ್.ಎ’ ಸುಪರ್ದಿಗೆ ತೆಗೆದುಕೊಂಡು ‘ಸ್ವರಾಜ್ ಹಾಗೂ ಶಹೀದ್’ ಎಂದು ನಾಮಕರಣ ಮಾಡಿದರು.

ಸ್ವತಂತ್ರ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ‘ಐ.ಎನ್.ಎ’ ಸೈನಿಕರು ಪುಳಕಿತರಾಗಿದ್ದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ , ಇತ್ತ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಕರೆ ನೀಡಬೇಕಾಗಿ ಬಂತು. ಈಗಿನ ಮಣಿಪುರದ ರಾಜಧಾನಿ ‘ಇಂಫಾಲ್’ ಹಾಗೂ ಕೊಹಿಮಾ ಕೂಡ ಐ.ಎನ್.ಎ ಕೈ ವಶವಾಗಿತ್ತು.ಆದರೆ ಮಹಾ ಯುದ್ಧದಲ್ಲಿ ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ‘ಐ.ಎನ್.ಎ’ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು ೧೯೪೫ರ ಆಗುಸ್ತ್ನಲ್ಲಿ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು (!) ಅನ್ನುವ ಸುದ್ದಿಗಳು ಬಂದವು ಬಹಳಷ್ಟು ಐ.ಎನ್ ಎ ಸೈನಿಕರನ್ನು ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ ‘ಕೋರ್ಟ್ ಮಾರ್ಷಲ್’ ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನಡೆದ ‘ನೌಕ ದಳದ’ ಬಂಡಾಯ (ಅದಕ್ಕೂ ನೇತಾಜಿಯವರ ಐ .ಎನ್.ಎ ಪರೋಕ್ಷ ಕಾರಣವೆಂದರು ತಪ್ಪಿಲ್ಲ) ಬ್ರಿಟಿಷರಿಗೆ ಚರಮ ಗೀತೆಯಾಯಿತು.

ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ ೧೯೪೭ರ ಆಗಸ್ಟ್ನಲ್ಲಿ ಇಲ್ಲಿಂದ ತೊಲಗಿದರು.ಭಾರತ ಸ್ವತಂತ್ರವಾಯಿತು.ಅವರೇನೋ ತೊಲಗಿದರು.ಭಾರತ ಸ್ವತಂತ್ರವು ಆಯಿತು,ಆದರೆ ಜನರನ್ನು ಬಹು ಕಾಲ ಕಾಡಿದ ಪ್ರಶ್ನೆ ಬ್ರಿಟಿಷರ ನಿದ್ದೆಗೆಡಿಸಿದ ಸುಭಾಷರು ‘ಬದುಕಿದ್ದಾರಾ!?’ ಬದುಕಿದ್ದರೆ ಎಲ್ಲಿದ್ದರು?ಸೆರೆಯಲ್ಲಿದ್ದರ? ಇದ್ದರೆ ಯಾರ ಸೆರೆಯಲ್ಲಿದ್ದರು? ಸ್ವತಂತ್ರ ಭಾರತದಲ್ಲಿ ಅಜ್ಞಾತರಾಗಿ ಬದುಕಿದ್ದರ? ಹಾಗೆ ಬದುಕುವಂತೆ ಮಾಡಿದ್ದು ಯಾರು?ಯಾಕೆ ಅವರ ಸಾವಿನ ಬಗ್ಗೆ ಸರ್ಕಾರಗಳಿಗೆ ಅಸಡ್ಡೆ? ಪ್ರಶ್ನೆಗಳು ಸಾವಿರಾರು ,ಆದರೆ ಉತ್ತರ ಕೊಡುವವರು ಯಾರು?

ಅಂದಿಗೆ ಹಿಟ್ಲರ್ ಮಣ್ಣಾಗಿದ್ದ,ಜಪಾನ್ ಸೋತು ಶರಣಾಯಿತು.ಸುಭಾಷರು ಗುಪ್ತ ಸಭೆಯೊಂದನ್ನು ನಡೆಸಿ ,ಜಪಾನಿ ಅಧಿಕಾರಿಗಳು ಹತ್ತಿದ್ದ ವಿಮಾನವನ್ನ ಹತ್ತಿದರು,ಅವರೊಂದಿಗೆ ಇದ್ದ ಮತ್ತೊಬ್ಬ ‘ಐ.ಎನ್.ಎ’ ಅಧಿಕಾರಿಯ ಹೆಸರು ‘ಹಬಿಬುರ್ ರಹಮಾನ್’.ಮುಂದೆ ತೈಪೆಯಲ್ಲಿ ಆ ವಿಮಾನ ಅಪಘಾತಕ್ಕಿಡಾಗಿ ಸುಭಾಷರು ಮರಣ ಹೊಂದಿದರು ಅಂತ ತಾವು ಸಾಯುವವರೆಗೆ ಸಾಧಿಸುತ್ತಲೇ ಬಂದವರು ಇದೆ ರಹಮಾನ್ ಅವರು.ಹಾಗೆ ಅವರು ಹೇಳಿದ್ದ?ಅಥವಾ ಅವರಿಂದ ಹೇಳಿಸಲಾಯಿತ? ಗೊತ್ತಿಲ್ಲ.

ಸ್ವತಂತ್ರ ಬಂದು ಹತ್ತು ವರ್ಷಗಳ ನಂತರ ನಮ್ಮ ಮೊದಲ ಪ್ರಧಾನಿಯವರಿಗೆ ಜ್ಞಾನೋದಯವಾಗಿ ಸುಭಾಷರ ಸಾವಿನ ಕುರಿತ ರಹಸ್ಯ ಬೇಧಿಸಲು ‘ಷಾ ನವಾಜ್ ಸಮಿತಿ’ ರಚಿಸಿದರು.ಆ ಸಮಿತಿಯವರಿಗೆ ಅದೇನು ಬೇರೆ ಕೆಲಸವಿತ್ತೋ , ದಿಡೀರ್ ಅಂತ ವರದಿ ಒಪ್ಪಿಸಿಯೇ ಬಿಟ್ಟರು.ಮುಂದೆ ‘ಖೊಸ್ಲಾ ಸಮಿತಿ’ ಎಲ್ಲ ಹೇಳಿದ್ದು ಒಂದೇ ಅವರು ವಿಮಾನಪಾಘತದಲ್ಲಿ ಮಡಿದರು ಅಂತ.ಖುದ್ದು ತೈಪೆ ಸರ್ಕಾರವೇ ಆ ದಿನ ಯಾವ ವಿಮಾನವು ಹಾರಿಲ್ಲ ಅಂದರೆ ಕೇಳುವವರು ಯಾರು ಇರಲಿಲ್ಲ.ವಾಜಪೇಯಿ ಸರ್ಕಾರದ ಸಮಯದಲ್ಲಿ ರಚನೆಯಾದ ‘ಮುಖರ್ಜಿ ಸಮಿತಿ’ ಮಾತ್ರ ಹೇಳಿದ್ದು ವಿಮಾನಪಾಘತದಲ್ಲಿ ಅವರು ಸಾವಿಗೀಡಾಗಿಲ್ಲ ಅಂತ.ಆದರೆ ಯು.ಪಿ.ಎ ಸರ್ಕಾರಕ್ಕೆ ಅದು ಹಿಡಿಸಲಿಲ್ಲ ಅನ್ನಿಸುತ್ತೆ ,ಆ ವರದಿಯನ್ನೇ ತಿರಸ್ಕರಿಸಿದರು.ಯಾಕಪ್ಪಾ ಹಿಂಗ್ ಮಾಡ್ತೀರಾ ಅಂದ್ರೆ, ನೇತಾಜಿಯವರ ಸಾವಿನ ರಹಸ್ಯ ಬಯಲಾದರೆ ಅವರ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತೆ ಅಂತ ಹೇಳಿಕೆ ಕೊಟ್ಟುಬಿಟ್ಟರು. ಯಾವ್ದು ನಿಜ?ಗೊತ್ತಿಲ್ಲ.

ನೇತಾಜಿ ನಿಗೂಡ ಅಂತ್ಯವನ್ನು ಖಾಸಗಿಯಾಗಿ ತನಿಖೆ ಮಾಡ ಹೋರಾಟ ಪುರಬಿ ರಾಯ್ ಇನ್ನು ಹಲವರು ತಮಗೆ ಜೀವ ಬೆದರಿಕೆ ಬಂದಿತ್ತು ಅಂತ ಹೇಳುತ್ತಾರೆ, ಪುರಬಿ ರಾಯ್ ಅವರಿಗೆ ರಷ್ಯದ ಏಜೆಂಟ್ ಒಬ್ಬ ಸ್ಟಾಲಿನ್ ಅವರಿಗೆ ಭಾರತದ ಧೀಮಂತ(!) ನಾಯಕರೊಬ್ಬರಿಂದ ಬಂದ ಪತ್ರದ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯಿದೆ. ಪುರಬಿ ರಾಯ್ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಲು ಆಸಕ್ತಿ ತೋರುತಿದ್ದಂತೆ ಅವರು ಮಾಡುತಿದ್ದ ಕೆಲಸವನ್ನು ಕಳೆದುಕೊಂಡರು. ಹಾಗೆ ಹಿಂದುಸ್ತಾನ್ ಟೈಮ್ಸ್ .ಕಾಂ ನಡೆಸಿದ ತನಿಖೆಯಲ್ಲಿ ಹೇಳುವುದೇನೆಂದರೆ ನೇತಾಜಿ ಅಂದು ಸಾಯಲಿಲ್ಲ ಮರಳಿ ಭಾರತಕ್ಕೆ ಬಂದು ‘ಭಗವಾನ್ ಜಿ’ ಯಾಗಿ ಉತ್ತರ ಭಾರತದಲ್ಲಿ ಅಜ್ಞಾತರಾಗಿ ಬದುಕಿ ೧೯೮೦ರ ದಶಕದಲ್ಲಿ ಮಡಿದರು ಅಂತ.ಇದು ನಿಜವಾದರೆ ಹಾಗೆ ಅವರು ಅಜ್ಞಾತವಾಸ ಮಾಡಬೇಕಾಗಿ ಬಂದಿದ್ದರು ಹೇಗೆ?

ಈ ಎಲ್ಲದರ ಹಿಂದೆ ಯಾವುದೋ ಅಂತರಾಷ್ಟ್ರೀಯ ಪಿತೂರಿ ಇತ್ತ?ಯಾಕೆ ಅವರ ಸಾವಿನ ರಹಸ್ಯ ಬಯಲಾದರೆ ಇತರ ದೇಶಗಳ ಜೊತೆ ನಮ್ಮ ಸಂಬಂಧ ಹದಗೆಡುತ್ತದೆ? ಭಗವಾನ್ ಜಿ ಕೆಲವೊಂದು ಸಂಧರ್ಭಗಳಲ್ಲಿ ಅವರ ಸಹವರ್ತಿಗಳೊಂದಿಗೆ ಮಾತಾಡುವಾಗ ‘ಹಿಂದೆ ಕೆಲ ಜನಗಳಿಂದಾದ ಅನುಭವದಿಂದ ಪಾಠ ಕಲಿತಿದ್ದೇನೆ’ ಅನ್ನುವ ಅರ್ಥ ಬರುವಂತೆ ಮಾತಡಿದ್ದಾದರೂ ಯಾಕೆ? ನೇತಾಜಿಯವರ ಸಹವರ್ತಿಗಳೇ,ಭಗವಾನ್ ಜಿಯವರ ಸಹವರ್ತಿಗಳಾಗಿದ್ದಾದರೂ ಹೇಗೆ?

ಅಂದು ಹಿಟ್ಲರ್ ಮಣ್ಣಾಗದೆ ಇದ್ದಿದ್ದರೆ ,ಜಪಾನ್ ಸೋಲದೆ ಇದ್ದಿದ್ದರೆ, ಐ.ಎನ್ .ಎ ದಿಗ್ವಿಜಯ ಸಾಧಿಸಿದ್ದರೆ ಭಾರತ ಸುಭಾಷರನ್ನು ಮಿಸ್ ಮಾಡ್ಕೋತ ಇರ್ಲಿಲ್ಲ . ಆದರೆ ವಿಧಿಯಾಟ ಬೇರೆಯಾಗಿತ್ತು.ಸುಭಾಷರನ್ನು ಮತ್ತೆ ಕಾಣುವ ಭಾಗ್ಯ ನಮಗೆ ಸಿಗಲೇ ಇಲ್ಲ :(

ನೇತಾಜಿಯವರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದರ ಮೂಲಕವಾದರೂ ಆ ಚೇತನಕ್ಕೆ ಚಿರ ಶಾಂತಿಯನ್ನು ಕೋರೋಣ.

ಜೈ ಹಿಂದ್

ಚಿತ್ರ ಕೃಪೆ :topnews.in
ರಾಕೇಶ್ ಶೆಟ್ಟಿಯವರ ಬ್ಲಾಗ್ ನಿಂದ ಪಡೆದಂತಹ ಲೇಖನ.ಯಥಾವತ್ತಾಗಿ ಪ್ರಕಟಿಸಲಾಗಿದೆ.

No comments:

Post a Comment