ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.
ಗಾಂಧೀಜಿ,ಸಾವರ್ಕರ್,ಸುಭಾಷ್,ಅಂಬೇಡ್ಕರ್,ನೆಹರೂ ಸೇರಿದಂತೆ ಆಗಿನ ಎಲ್ಲ ಮೊದಲ ಸಾಲಿನ ನಾಯಕರು ಈ ವಿಷಯದಲ್ಲಿ ಎಡವಿದವರೇ.ಸ್ವಾತಂತ್ರ್ಯ ಪೂರ್ವದಲ್ಲೇ ನಡೆದ ಇಂತ ಹೋರಾಟದಿಂದಾದರೂ ಆಗಿನ ನಾಯಕರುಗಳು ಈ ದೇಶದ ಭಾಷ ವೈವಿಧ್ಯತೆಯನ್ನ ಸೂಕ್ಷ್ಮವಾಗಿ ಗಮನಿಸಬೇಕಾಗಿತ್ತು, ಆದರೆ ಗಮನಿಸಲಿಲ್ಲ.ಸ್ವಾತಂತ್ರ್ಯ ಬಂದ ಮೇಲೆ ಮತ್ತೊಂದು ಎಡವಟ್ಟು ಮಾಡಿದ್ರು.ಅದು ೧೫ ವರ್ಷಗಳ ನಂತರ ಹಿಂದಿಯೊಂದೇ ಭಾರತದ ಆಡಳಿತಾತ್ಮಕ ಭಾಷೆಯಾಗುತ್ತದೆ ಅನ್ನೋ ಅಂಶವನ್ನ ಸಂವಿಧಾನದಲ್ಲಿ ಸೇರಿಸಿದ್ದು! ಮತ್ತೆ ಎದ್ದು ನಿಂತರು ತಮಿಳರು.ಸರಿ ಸುಮಾರು ಎಪ್ಪತ್ತು ಜೀವಗಳು ಬಲಿದಾನಗೈದವು.ಕಡೆಗೆ ಆಗಿನ ಪ್ರಧಾನಿ ಶಾಸ್ತ್ರಿಗಳು ಹಿಂದಿಯೇತರ ರಾಜ್ಯಗಳು ಬಯಸುವವರೆಗೂ ಇಂಗ್ಲಿಷ್ ಸಹ ನಮ್ಮ ಆಡಳಿತಾತ್ಮಕ ಭಾಷೆಗಳಲ್ಲೊಂದಾಗಿರುತ್ತದೆ ಅಂತ ಹೇಳಿಕೆ ಕೊಟ್ಟ ಮೇಲೆ ಪರಿಸ್ಥಿತಿ ಹತೋಟಿಗೆ ಬಂದಿದ್ದು.ಆಗ ಕೈಗೊಂಡ ತಪ್ಪು ನಿರ್ಧಾರದಿಂದ ೧೯೬೭ರಲ್ಲಿ ಪಟ್ಟ ಕಳೆದುಕೊಂಡ ಕಾಂಗ್ರೆಸ್ಸ್ ಎಂಬ ಕಾಂಗ್ರೆಸ್ ಇವತ್ತಿನವರೆಗೆ ತಮಿಳುನಾಡಿನಲ್ಲಿ ಪತ್ತೆಯಿಲ್ಲದಂತಾಗಿದೆ.
ಈ ಎರಡು ಪ್ರಬಲ ಹೋರಾಟದಿಂದಾಗಿ ಹಿಂದಿಯನ್ನ ಮುಂಬಾಗಿಲ ಮೂಲಕ ಹಿಂದಿಯೇತರ ರಾಜ್ಯಗಳು (ದಕ್ಷಿಣ ಹಾಗೂ ಪೂರ್ವ) ಒಪ್ಪುವುದಿಲ್ಲ ಅಂತ ಮನವರಿಕೆಯಾದ ನಂತರ ಕೇಂದ್ರ ಸರ್ಕಾರ ಹಿಂಬಾಗಿಲ ಮೂಲಕ ಪರೋಕ್ಷವಾಗಿ ಹಿಂದಿ ಹೇರಿಕೆಯನ್ನ ಶುರು ಹಚ್ಚಿಕೊಂಡಿದ್ದು.ಈ ಹಂತದಲ್ಲೇ ಬಂದಿದ್ದು ತ್ರಿಭಾಷಾ ಸೂತ್ರ!
ಅದನ್ನ ಹಲವು ರಾಜ್ಯಗಳು ಒಪ್ಪಿಕೊಂಡವು.ಅದರಲ್ಲಿ ಕರ್ನಾಟಕವು ಒಂದಾಗಿತ್ತು.ಅವೈಜ್ಞಾನಿಕ ತ್ರಿ ಭಾಷ ಸೂತ್ರದಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡ ಕಲಿಯದೇ ಸಹ ಒಬ್ಬ ಕನ್ನಡ ವಿದ್ಯಾರ್ಥಿ ಹೈ-ಸ್ಕೂಲ್ ಅನ್ನು ಸಂಸ್ಕೃತ,ಇಂಗ್ಲಿಷ್ ಹಾಗೂ ಹಿಂದಿ ಕಲಿತು ಮುಗಿಸಬಹುದಿತ್ತು.ಸಾಹಿತಿಗಳು,ಬುದ್ದಿಜೀವಿಗಳು ದನಿಯೆತ್ತಿದ್ದರಿಂದಾಗಿ ಬಂದ ‘ಗೋಕಾಕ್ ವರದಿ’ ಕನ್ನಡಕ್ಕೆ ಶಾಲೆಯಲ್ಲಿ ಪ್ರಥಮ ಭಾಷೆಯ ಸ್ಥಾನಮಾನ ನೀಡಬೇಕು ಅಂತ ಹೇಳಿತ್ತು.ಆದರೆ ಸರ್ಕಾರ ಕೆಲವು ಜನರ ವಿರೋಧ ನೋಡಿ ವರದಿ ಜಾರಿಗೆ ತರಲಿಲ್ಲ.ನಿಧಾನಕ್ಕೆ ಮತ್ತೆ ಚಳುವಳಿ ಶುರುವಾಯಿತು.ಕನ್ನಡಿಗರು ಯಥಾ ಪ್ರಕಾರ ಮಲಗೆ ಇದ್ದರು!!
ಕನ್ನಡ ಹೋರಾಟಗಾರರ ಕರೆಗೆ ಓ ಗೊಟ್ಟು ಡಾ|| ರಾಜ್ ಕುಮಾರ್ ಎದ್ದು ಹೊರಟರು.ಹಾಗೆ ಶುರುವಾಯಿತು ‘ಗೋಕಾಕ್ ಚಳುವಳಿ’ ಅನ್ನುವ ಸುವರ್ಣ ಅಧ್ಯಾಯ.ರಾಜ್ ರಂಗ ಪ್ರವೇಶದಿಂದ ಮಲಗಿದ್ದ ಜನರು ಬೀದಿಗಿಳಿದರು,ಸರ್ಕಾರ ತಲೆಬಾಗಿತು.ಕನ್ನಡ ಕಲಿಕೆ ಕಡ್ಡಾಯವಾಯಿತು.ಅವತ್ತೆನಾದರು ಗೋಕಾಕ್ ಚಳುವಳಿಯಾಗದೆ ಇದ್ದಿದ್ದರೆ ಬಹುಷಃ ನಾನಿವತ್ತು ಇದನ್ನ ಕನ್ನಡದಲ್ಲಿ ಬರೆಯುತಿದ್ದೆನಾ!? ಗೊತ್ತಿಲ್ಲ.
ನಾವೇನೋ ನಮ್ಮ ರಾಜ್ಯದಲ್ಲಿ ಕನ್ನಡ,ಇಂಗ್ಲೀಷ್,ಹಿಂದಿ ಕಲಿಯುತ್ತ ಬಂದೆವು.ಅಲ್ಲೂ ಹಿಂದಿ ಕಲಿಕೆಯ ಸಮಯದಲ್ಲಿ ಮುಗ್ದ ಮಕ್ಕಳಿಗೆ ‘ಹಿಂದಿ ನಮ್ಮ ರಾಷ್ಟ್ರ ಭಾಷೆ’ ಅನ್ನೋ ಶುದ್ಧ ಸುಳ್ಳನ್ನ ಕಲಿಸಲಾಯಿತು,ಬಹುಷಃ ಈಗಲೂ ಕಲಿಸಲಾಗುತ್ತಿದೆ.ಅಸಲಿಗೆ ಈ ದೇಶದಲ್ಲಿ ‘ರಾಷ್ಟ್ರ ಭಾಷೆ’ಯೇ ಇಲ್ಲ ಅನ್ನುವುದು ಬಹಳಷ್ಟು ಜನಕ್ಕೆ ತಿಳಿದಿಲ್ಲ! (ಆರ್ಟಿಕಲ್ ೩೪೩).ಜಗತ್ತಿನ ಯಾವುದೇ ಭಾಷೆ ಕಲಿಯೋದು ತಪ್ಪಲ್ಲ ಹಾಗೆ ಹಿಂದಿ ಕಲಿಯೋದು ತಪ್ಪಲ್ಲ,ಆದರೆ ಅದನ್ನ ಸುಳ್ಳು ಸುಳ್ಳೇ ರಾಷ್ಟ್ರ ಭಾಷೆ ಅದಿಕ್ಕೆ ಕಲೀರಿ ಅಂತ ಮುಗ್ದ ಮಕ್ಕಳಿಗೆ ಹೇಳಿ ಕಲಿಸೋದು ಇದ್ಯಲ್ಲ ಅದು ತಪ್ಪು.ಅಂತ ವ್ಯವಸ್ತೆಗೆ,ಜನರೆಡೆಗೆ ಧಿಕ್ಕಾರವಿರಲಿ.
ಹಾಗೆ ನೋಡಿದರೆ ಈ ತ್ರಿ-ಭಾಷ ಸೂತ್ರವೇನೋ ಒಳ್ಳೆಯದೇ.ಆದರೆ ಈಗಿನಂತೆ ಇಂಗ್ಲೀಶ್ ಹಾಗೂ ಹಿಂದಿಯನ್ನ ೨ ಭಾಷೆಗಳಾಗಿ ಕಡ್ಡಾಯವಾಗಿ ಕಲಿಸುವ ನಿರ್ಧಾರವಿದೆಯಲ್ಲ, ಅದು ಒಳ್ಳೆಯದ್ದಲ್ಲ.ಇಂಗ್ಲೀಷ್ ಬಹುತೇಕ ಜನರಿಗೆ ಅನ್ನ ಕೊಡುವ ಭಾಷೆ ಹಾಗಾಗಿ ಅದು ಕಲಿಯೋಣ.ಇನ್ನುಳಿದಂತೆ ಅವರವರ ಮಾತೃ ಭಾಷೆಯು ಅಗತ್ಯವಾಗಿ ಕಲಿಯಲೇಬೇಕು.ಸಮಸ್ಯೆಯಿರುವುದು ಮೂರನೇ ಭಾಷೆಯಲ್ಲಿ!.ಮೂರನೇ ಭಾಷೆಯಾಗಿ ಹಿಂದಿಯನ್ನ ಏಕೆ ಕಡ್ಡಾಯವಾಗಿ ಕಲಿಯಬೇಕು? ಕಲಿತು ಒಬ್ಬ ಕನ್ನಡಿಗ ಕರ್ನಾಟಕದಲ್ಲಿ ಯಾರೊಂದಿಗೆ ವ್ಯವಹರಿಸಬೇಕಿದೆ?,ಅದೇ ಇನ್ನೊಂದು ಭಾಷೆಯಾಗಿ ಯುನೆಸ್ಕೋದ ವರದಿಯಂತೆ ಭಾರತದ ಅಳಿವಿನಂಚಿನಲ್ಲಿರುವ ೧೯೬ ಭಾಷೆಗಳಲ್ಲಿ ಸೇರಿ ಹೋಗಿರುವ ನಮ್ಮ ನೆಲದ ಭಾಷೆಗಳಾದ ‘ತುಳು,ಕೊಂಕಣಿ,ಕೊಡವ’ ಭಾಷೆಗಳನ್ನೇ ಏಕೆ ನಾವು ಕಲಿಯ ಬಿಡುವುದಿಲ್ಲ ಈ ತ್ರಿಭಾಷ ನೀತಿ? ನಮ್ಮ ಆಯ್ಕೆಯ ಭಾಷೆಗಳನ್ನ ಕಲಿಯಬಿಟ್ಟರಷ್ಟೇ ಈ ತ್ರಿ ಭಾಷ ನೀತಿಗೆ ಒಂದು ಅರ್ಥ ಬರುವುದು.
ಹಿಂದಿಯನ್ನ ವಿರೋಧಿಸುವವರನ್ನ ದೇಶ ದ್ರೋಹಿಗಳು ಅನ್ನೋ ಮಟ್ಟದಲ್ಲಿ ನೋಡುವ ಮಂದಿಯೇ ಈ ದೇಶದಲ್ಲಿ ಹೆಚ್ಚಿದ್ದಾರೆ. ೧೯೪೬ ರ ಡಿಸೆಂಬರ್ ೧೦ರಂದು ಶಾಸನ ಸಭೆಯಲ್ಲಿ ನಡೆದ ಈ ಘಟನೆಯೇ ಇಂತ ಮನಸ್ಥಿತಿಗಳಿಗೆ ಒಂದು ಉದಾಹರಣೆ.
ಆ ಸದಸ್ಯನ ಹೆಸರು ಧುಲೆಕರ್.ಸದನದಲ್ಲಿ ಮಾತನಾಡ ನಿಂತವನು ಹಿಂದಿಯಲ್ಲಿ ಮಾತನಾಡುತ್ತಲೇ ಹೊರಟ, ಸಭಾಧ್ಯಕ್ಷರು ಹಿಂದಿ ಬಾರದ ಸದಸ್ಯರು ಸದನದಲ್ಲಿರುವುದರಿಂದ ಇಂಗ್ಲೀಶ್ ಬಳಸಲು ಹೇಳಿದಾಗ, ಈತ “ಹಿಂದಿ ಬರದಿರುವ ಜನ ಇಂಡಿಯಾದಲ್ಲಿರಲು ಲಾಯಕ್ಕಿಲ್ಲ’ ಅಂತ ಹೇಳಿದ್ದ.ಅಷ್ಟೇ ತೀಕ್ಷ್ಣವಾಗಿ “ಹಾಗಿದ್ದರೆ,ನಿಮಗೆ ಹಿಂದಿ-ಇಂಡಿಯ ಬೇಕೋ ಇಲ್ಲ ಪರಿಪೂರ್ಣ ಇಂಡಿಯ ಬೇಕೋ ಅನ್ನುವುದನ್ನ ನೀವೇ ನಿರ್ಧರಿಸಿ” ಅನ್ತ ಹೇಳಿದವರು ಕೃಷ್ಣಾಮಚಾರಿಗಳು.ಹಿಂದಿಯ ಹೇರಿಕೆಗಾಗಿ ಕೇಂದ್ರ ಸರ್ಕಾರ ವರ್ಷಕ್ಕೆ ೩೬ ಕೋಟಿಗಳಷ್ಟು ತೆರಿಗೆಯ ಹಣವನ್ನ ಸುರಿಯುತ್ತಿದೆ.ಯಾವ ಪುರುಷಾರ್ಥಕ್ಕಾಗಿ? ಅತ್ತ ನೋಡಿದರೆ ಈ ಮಣ್ಣಿನ ೧೯೬ ಭಾಷೆಗಳು ಅಳಿವಿನಂಚಿನಲ್ಲಿವೆ ಈ ಹಣವನ್ನ ಎಲ್ಲ ಭಾಷೆಗಳ ಅಭಿವೃದ್ದಿಗೆ ಬಳಸಿದರೆ ಒಳ್ಳೆಯದಲ್ಲವೇ.
ಹಿಂದಿ ರಾಷ್ಟ್ರ ಭಾಷೆ ಅಂತ ಹೇಳೋ ಹಸಿ ಸುಳ್ಳನ್ನ ನಿಲ್ಲಿಸಿ ಹಾಗೆ ಹಿಂದಿ ಅಂದರೆ ದೇಶ ಪ್ರೇಮ ಅನ್ನೋ ಕತೆಗಳನ್ನೆಲ್ಲ ಇಂತ ಜನರು ನಿಲ್ಲಿಸಬೇಕಿದೆ.ಹಿಂದಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ ಅನಗತ್ಯ ಪ್ರಾಮುಖ್ಯತೆಯನ್ನ ನಿಲ್ಲಿಸಿ ಆಯಾ ರಾಜ್ಯದ ಆಡಳಿತ ಭಾಷೆಯಲ್ಲೇ ಕೇಂದ್ರವು ಆಯಾ ರಾಜ್ಯಗಳೊಂದಿಗೆ ವ್ಯವಹರಿಸಬೇಕು.ಹಾಗೆ ಮಾಡುವುದರಿನ್ದಷ್ಟೇ ಅನಗತ್ಯ ಇಂಗ್ಲೀಶ್ ಬಳಕೆಯನ್ನ ತಪ್ಪಿಸಬಹುದು.
ಅಷ್ಟಕ್ಕೂ ‘ಒಂದು ಭಾಷೆ ಸತ್ತರೆ ಅದು ಸಂಸ್ಕೃತಿಯ ಸಾವು‘ ಅನ್ನುವುದನ್ನ ಸೋಕಾಲ್ಡ್ ದೇಶ ಭಕ್ತರು ಹಾಗೂ ಇಂಗ್ಲೀಶ್ ವಿರೋಧಿಗಳು ಅರ್ಥ ಮಾಡಿಕೊಳ್ಳಲಿ.ಅದ್ಯಾವ್ ಆಧಾರದ ಮೇಲೆ ಹಿಂದಿ ಇಲ್ಲಿಯ ರಾಷ್ಟ್ರ ಭಾಷೆ ಆಗ್ಬೇಕು ಅಂದ್ರೆ ಅದು ಬಹುಸಂಖ್ಯಾತರ ಭಾಷೆಯಪ್ಪ ಅಂತ ಮಾತನಾಡುವವರು ಒಂದು ವಿಷಯ ನೆನಪಿಟ್ಟುಕೊಳ್ಳಬೇಕು.ಉಪಖಂಡವನ್ನ ಭಾರತ ದೇಶ ಅಂತ ಹಿಡಿದಿಟ್ಟವರು ಬ್ರಿಟಿಷರು.ಅಲ್ಲಿಯವರೆಗೂ ಭಾರತ ಅನ್ನೋ ದೇಶ ಈಗಿನಂತೆ ಒಂದಾಗಿ ಇರಲಿಲ್ಲ.ಆಗ ಇಲ್ಲಿ ನಡೆಯುತಿದ್ದಿದ್ದು ಆಯಾ ಜನರ ನೆಲದ ಭಾಷೆಯೇ.ಅವರು ಹೋದ ಮೇಲೆ ನಾವೇನೋ ಇಂದು ಒಂದು ದೇಶವಾಗಿದ್ದೇವೆ.ನಮ್ಮದು ವೈವಿಧ್ಯತೆಯಲ್ಲಿ ಏಕತೆಯನ್ನ ಹೊಂದಿರುವ ದೇಶ.ಯಾವುದೋ ಒಂದು ಭಾಷೆಯ ಮೂಲಕ ಏಕತೆ ಮೂಡಿಸುತ್ತೇವೆ ಅಂತ ಹೊರಡುವ ಭ್ರಮೆಯಿಂದ ವೈವಿಧ್ಯತೆ ನಾಶವಾಗದಿರಲಿ.ವೈವಿದ್ಯತೆ ನಾಶವಾದರೆ ಅಲ್ಲಿಗೆ ಏಕತೆಯು ನಾಶವಾದಂತೆಯೇ ಸರಿ. ನಮ್ಮ ಜನರ ಭಾಷೆ ಸಂಸ್ಕೃತಿಯನ್ನ ನಾವೇ ಉಳಿಸದಿದ್ದರೆ ಬ್ರಿಟಿಷರ ಅಡಿಯಿದ್ದ ಭಾರತಕ್ಕೂ ಈಗಿನ ಸ್ವತಂತ್ರ ಭಾರತಕ್ಕೂ ವ್ಯತ್ಯಾಸವೆನಿರುತ್ತದೆ? ನಿರ್ಧರಿಸಬೇಕಾದವ್ರು ಕೇಂದ್ರ ಸರ್ಕಾರದವರು,ಉತ್ತರದ ರಾಜ್ಯಗಳವರು ಹಾಗೂ ಹಿಂದಿ ಅಂದ್ರೆ ಇಂಡಿಯ ಅನ್ನೋ ಭ್ರಮೆಯಲ್ಲಿರೋ ನಮ್ಮ ಸ್ನೇಹಿತರು,ಹಿತೈಷಿಗಳು.
ನೆನಪಿರಲಿ, ಈ ದೇಶದ ಪ್ರತಿ ಭಾಗದ ಜನರ ಭಾಷೆ,ಆಚರಣೆ,ಸಂಸ್ಕೃತಿಗಳ ಸಮ್ಮಿಲನವೇ ಭವ್ಯ ಭಾರತ ಭವಿಷ್ಯವಾಗಬೇಕು.ಆಗಷ್ಟೇ ನಮ್ಮ ನೆಮ್ಮದಿಯ ನಾಳೆಗಳಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದವರ ತ್ಯಾಗಕ್ಕೂ ಒಂದು ಗೌರವ.
No comments:
Post a Comment