Sunday, September 12, 2010

ಜೈ ಎಂದ ಬಾಲಕ ಅಂಗವಿಕಲ


ಅಲ್ಲಿ ನೋಡು ಬಿಜೆಪಿ, ಇಲ್ಲಿ ನೋಡು ಬಿಜೆಪಿ. ಅಲ್ಲಿ ಕಮಲ, ಎಲ್ಲೆಲ್ಲೂ ಕಮಲ ಹೀಗೆಂದು ಕೂಗುತ್ತಿದ್ದ ಬಾಲಕ ಇವತ್ತು ಅಂಗವಿಕಲನಾಗಿದ್ದಾನೆ. ಆದರೆ ಇವನು ಜೀವನದಲ್ಲಿ ಶಿಕ್ಷಕನಾಗಬೇಕೆಂದು ಬಯಸುತ್ತಾನೆ. ಆತನಲ್ಲಿರುವ ಮನಸ್ಥೈರ್ಯವನ್ನು ಮೆಚ್ಚಲೇಬೇಕಾಗಿದೆ.
ಅಂಗವಿಕಲನಾದ ದುರ್ದೈವಿಯೇ ವಿನೋದ. 2004ರ ವಿಧಾನಸಭಾ ಚುನಾವಣೆ ಅಂದು ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎಂದಿನಂತೆ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟಿತು. ಎಲ್ಲಾ ಹುಡುಗರಂತೆ ಈತನೂ ಕೈಯಲ್ಲಿ ಬಾವುಟ ಹಿಡಿದು ಜೈ ಜೈ ಎಂದು ಹೊರಟ. ಮೆರವಣಿಗೆ ತಾಲ್ಲೂಕು ಕಚೇರಿಯ ಸಮೀಪ ಬರುತ್ತಿದ್ದಂತೆ ಹಿಂದಿನಿಂದ ಬಂದ ಬಸ್ಸೊಂದು ಈತನ ಕಾಲ ಮೇಲೆ ಹರಿದೇ ಹೋಯಿತು. ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ಎಂದಿನಂತೆ ನಾಮಪತ್ರ ಸಲ್ಲಿಸಿದ್ದರು.ಪುಡಿ ಕಾಸಿನ ಆಸೆಗೆ ಹೋಗಿದ್ದ ಬಾಲಕನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿತ್ತು.

ಎಲ್ಲರೊಂದಿಗೆ ಆಡಿಕೊಂಡಿದ್ದ ವಿನೋದ ಅಂಗವಿಕಲನಾಗಿದ್ದ. ಯಾವನೋ ಒಬ್ಬ ಬಿಜೆಪಿ ಕಾರ್ಯಕರ್ತ ನಿಮಗೆಲ್ಲಾ ಹಣ ಕೊಡುತ್ತೀನಿ ಎಂದು ಮಕ್ಕಳನ್ನು ಕರೆದುಕೊಂಡು ಹೋದದ್ದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಯಿತು. ಮನೆಯಲ್ಲಿ ಬಡತನ.ಈತ ಕಿರಿಯ ಮಗ, ಅಕ್ಕನಿಗೆ ಮದುವೆಯಾಗಬೇಕು, ಅಣ್ಣ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಈತ ದಿನ ನಿತ್ಯ ಬಸ್ಟಾಂಡಿನಲ್ಲಿ ಹಣ್ಣು ಮಾರುತ್ತಾನೆ. ಕಟ್ಟಿಗೆ ಸೀಳುತ್ತಾನೆ,ಹಂಚು ಜೋಡಿಸುತ್ತಾನೆ, ಶಾಲೆಯ ರಜಾ ದಿನಗಳಲ್ಲಿ ಹೋಟೆಲ್ ಗಳಲ್ಲಿ ಲೋಟ ತೊಳೆಯುತ್ತಾನೆ ಹೀಗೆ ಹಲವು ಕೆಲಸಗಳನ್ನು ಮಾಡುವುದರ ಮೂಲಕ ವಾರಕ್ಕೆ 150 ರಿಂದ 200ರೂಪಾಯಿ ದುಡಿಯುತ್ತಾನೆ. ಇದು ತನ್ನ ತಾಯಿಗೆ ಸಹಕಾರಿಯಾಗುತ್ತಿದೆ ಎನ್ನುತ್ತಾನೆ. ತನ್ನ ಹಳೆಯ ಅಪಘಾತವನ್ನು ನೆನಸಿಕೊಂಡು ಅಳುತ್ತಾನೆ. ಆದರೂ ತನ್ನ ವಿದ್ಯಾಭ್ಯಾಸವನ್ನು ಬಿಟ್ಟಿಲ್ಲ. ಸರ್ಕಾರಿ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದಾನೆ. ನಾನು ಮುಂದೆ ಶಿಕ್ಷಕನಾಗಬೇಕು. ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎನ್ನುವ ಮನೋಭಾವವಿದೆ. ಅದರ ಕನಸನ್ನೇ ಕಾಣುತ್ತಿದ್ದಾನೆ. ಈವರೆಗೆ ಯಾವ ಜನಪ್ರತಿನಿಧಿಯೂ ಇವನಿಗೆ ಸಹಾಯ ಹಸ್ತ ಚಾಚಿಲ್ಲ. ಇವನ ಆಸೆ ಈಡೇರುತ್ತದೆಯೇ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಬಹುಷಃ ಉಳಿಯುತ್ತದೆ.

No comments:

Post a Comment