Monday, June 28, 2010

ಅಪರೂಪದ ವಿಶಿಷ್ಟ ಕಲಾವಿದ ಕಾಶಿ



ಕಲೆಯೆನ್ನುವುದು ಎಲ್ಲರಲ್ಲಿರುತ್ತೆ ಆದರೆ ವಿಶೇಷವಾದ ಕಲೆಗಳು ಕೆಲವರಿಗೆ ಮಾತ್ರ ಒಲೆದಿರುತ್ತದೆ. ಅದರಲ್ಲೂ ವಿಗ್ರಹ ಕೆತ್ತನೆ ಮತ್ತು ಸಿಮೆಂಟ್ ವಿಗ್ರಹಗಳನ್ನು ರೂಪಿಸುವಂತಹ ಕಲೆ ಬಹಳ ವಿಶಿಷ್ಟ. ಅಂತಹ ಕಲೆಯನ್ನು ಕರಗತ ಮಾಡಿಕೊಂಡು ಇಂದು ದೇಶಾದ್ಯಂತ ಪ್ರಸಿದ್ದಿಯಾಗಿರುವ ಕಾಶಿನಾಥ್ ಶಿಕಾರಿಪುರದವರು ಎನ್ನುವುದಕ್ಕಿಂತ ಕರ್ನಾಟಕ ರಾಜ್ಯದವರು ಎನ್ನುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ.

ಶಿಕಾರಿಪುರದ ಹುಚ್ಚರಾಯಸ್ವಾಮಿ ಕೆರೆಯ ತಟದಲ್ಲಿ ನಿರ್ಮಾಣವಾಗಿರುವ ಈಶ್ವರ ವಿಗ್ರಹ




ಇವರು ಕಳೆದ ಹತ್ತಾರು ವರ್ಷಗಳಿಂದ ಕಲ್ಲು ಕೆತ್ತನೆ, ಸಿಮೆಂಟ್ ವಿಗ್ರಹಗಳ ಸ್ಥಾಪನೆ ಸೇರಿದಂತೆ ವಿವಿಧ ಪುರಾತನ ಶಿಲ್ಪಕಲೆಗಳನ್ನು ರಚಿಸುವುದರ ಮೂಲಕ ಬಹಳಷ್ಟು ಪ್ರಸಿದ್ದಿ ಪಡೆದಿದ್ದಾರೆ. ಇವರು ನಿರ್ಮಿಸಿರುವ ಸಣ್ಣ ವಿಗ್ರಹಗಳು ಇಂದು ಜಗತ್ತಿನ ಸಾಕಷ್ಟು ದೇಶಗಳಲ್ಲಿ ಕಂಡು ಬರುತ್ತಿದೆ.

ಬೆಂಗಳೂರಿನ ಕಿಡ್ಸ್ ಕೆಂಪಿನ ಬಳಿ ನಿರ್ಮಾಣವಾಗಿರುವ ಈಶ್ವರ ವಿಗ್ರಹ




ಕಾಶಿನಾಥ್ ಮೂಲತಃ ಶಿಕಾರಿಪುರದವರು. ಇವರ ಕೃಷ್ಣರಾವ್ ಮತ್ತು ಪಾರ್ವತಮ್ಮ ದಂಪತಿಗಳ ಹಿರಿಯ ಪುತ್ರರು. ಸಿರಿವಂತರೇನು ಅಲ್ಲ. ಅವತ್ತಿನ ಗಂಜಿಗೆ ಅವತ್ತಿನ ದುಡಿಮೆ ಎನ್ನುವಂತಹ ಮನೆತನ. ಇವರ ಕುಟುಂಬದ ಸದಸ್ಯರೆಲ್ಲರೂ ಮರಗಳ ಹಾಗೂ ಕಲ್ಲಿನ ಕೆತ್ತೆನೆ ಮಾಡುವ ಕಾಯಕದವರು. ಹಾಗಾಗಿ ಬಾಲ್ಯದಿಂದಲೇ ಕಾಶಿರವರಲ್ಲಿ ಕೆತ್ತನೆ ಕಲೆ ಬಗ್ಗೆ ಆಸಕ್ತಿ ಮೂಡಿತು. ಶಿಕಾರಿಪುರದ ಪರಸಪ್ಪ ಚಿತ್ರಗಾರ್ ಎಂಬುವರಲ್ಲಿ ಕೆಲಸಕ್ಕೆ ಸೇರಿದರು. ಪ್ರಾರಂಭದಲ್ಲಿ ಸಣ್ಣ, ಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ ಕಾಶಿ ನಂತರ ಕಲ್ಲಿನ ಕೆತ್ತನೆಗೆ ಮುಂದಾದರು.

ಮುರುಡೇಶ್ವರದಲ್ಲಿ ಸಮುದ್ರದ ತಟದಲ್ಲಿರುವ ಸಿಮೆಂಟಿನ ಈಶ್ವರ ವಿಗ್ರಹ



ರಾಜ್ಯದ ಹಲವೆಡೆ ತಮ್ಮ ಗುರುಗಳಾದ ಪರಸಪ್ಪನವರ ಜೊತೆ ಕಲ್ಲಿನ ವಿಗ್ರಹಗಳ ಕೆತ್ತನೆಯನ್ನು ಮಾಡಿದರು. "ಆ ದಿನಗಳನ್ನು ಅವರು ನೆನಸಿಕೊಳ್ಳುವುದು ಹೀಗೆ. ಆಗ ನಾವು ಹಳ್ಳಿಗಳಲ್ಲಿ ವರ್ಷಾನುಗಟ್ಟಲೆ ಮನೆ ಮಠ ಬಿಟ್ಟು ಉಳಿದುಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ಗ್ರಾಮಸ್ತರು ನಮ್ಮಗಳಿಗೆ ಮನೆ, ದಿನ ನಿತ್ಯದ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಕೆಲಸ ಮುಗಿದ ಮೇಲೆ ಅಲ್ಲಿಂದ ಹೊರಡಬೇಕಲ್ಲಾ ಎನ್ನುವ ಬೇಸರ ನಮ್ಮನ್ನು ಕಾಡುತ್ತಿತ್ತು ಎಂದರೆ ಗ್ರಾಮಸ್ತರ ಪ್ರೀತಿ ಅಷ್ಟರ ಮಟ್ಟಿಗೆ ಇರುತ್ತಿತ್ತು. ಹಾಗೇ ಈಗಿನಂತೆ ತಯಾರಾದ ಬಣ್ಣ ಸಿಗುತ್ತಿರಲಿಲ್ಲ. ನಾವೇ ಬಣ್ಣ ತಯಾರಿಸಬೇಕಿತ್ತು. ಹಸಿರು ಬಣ್ಣಕ್ಕೆ ಮರದ ಎಲೆಯ ರಸವನ್ನು ತೆಗೆದು ಒಣಗಿಸುತ್ತಿದ್ದೆವು. ಸುಣ್ಣದ ಕಲ್ಲಿನಿಂದ ಬಿಳಿಯ ಬಣ್ಣ, ತವರ ಸೇರಿದಂತೆ ವಿವಿಧ ಕಲ್ಲುಗಳಿಂದಲೂ ಬಣ್ಣ ತಯಾರಿಸುತ್ತಿದ್ದೆವು. ಈಗಿನ ಬಣ್ಣ ಕೆಲ ವರ್ಷವಾದ ನಂತರ ಮಸುಕಾಗುತ್ತದೆ. ಆದರೆ ಆ ಬಣ್ಣಗಳು ಇಂದಿಗೂ ತನ್ನ ನೈಜತೆಯನ್ನು ಉಳಿಸಿಕೊಂಡಿದೆ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. "

ಕಾಶಿನಾಥ್



ಇವರು ಮುರುಡೇಶ್ವರದಲ್ಲಿ 40ಅಡಿಯ ಸಿಮೆಂಟಿನ ಈಶ್ವರ ವಿಗ್ರಹ, ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿರುವ ಕಿಡ್ಸ್ ಕೆಂಪ್ ನ 50 ಅಡಿಯ ಈಶ್ವರ, ಕೋಲಾರದ ಆಂಜನೇಯ, ಹಿಮಾಚಲ ಪ್ರದೇಶದ 70 ಅಡಿಯ ಈಶ್ವರ, ಚಿತ್ರನಟ ಅರ್ಜುನ್ ಸರ್ಜಾಗೆ ಕಲ್ಲಿನಲ್ಲಿ ರೂಪಿಸಿದಂತಹ ಆಂಜನೇಯ ವಿಗ್ರಹ. ಹೀಗೆ ದೇಶದ ಹಲವೆಡೆ ಇವರು ನಿರ್ಮಿಸಿರುವ ವಿಗ್ರಹಗಳು ಸಿಗುತ್ತದೆ. ಇಷ್ಟೆ ಅಲ್ಲದೆ ವಿದೇಶಗಳಲ್ಲೂ ಇವರ ಕೆತ್ತನೆ ಕಲೆಗೆ ಸಾಕಷ್ಟು ಬೇಡಿಕೆಯಿದೆ. ದೇವಸ್ಥಾನದ ಗೋಪುರ, ಅದಕ್ಕೆ ವಿಶೇಷ ರೂಪ ಕೊಡುವ ಕೆಲಸವನ್ನು ಮಾಡುತ್ತಾರೆ. ಚಿಕ್ಕಂದಿನಲ್ಲಿ ಬಹಳಷ್ಟು ಮರದ ರಥಗಳನ್ನು ನಿರ್ಮಿಸಿರುವ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಇದೀಗ 70ರ ಆಸುಪಾಸಿನಲ್ಲಿರುವ ಇವರು ಹಲವಾರು ಯುವಕರಿಗೆ ಕೆಲಸ ನೀಡಿದ್ದಾರೆ. ಆದರೆ ಕಡೆಯ ಫಿನಿಷ್ ಅಂದರೆ ಕಣ್ಣು,ಮೂಗು,ತುಟಿಯನ್ನು ಮಾತ್ರ ಇವರೇ ಖುದ್ದಾಗಿ ಸ್ಥಳಕ್ಕೆ ಬಂದು ರೂಪಿಸುವುದು ಇವರ ವಿಶೇಷತೆ.
ಇವರ ಅಜ್ಜ ತಿಪ್ಪಾಜಪ್ಪ ಮೈಸೂರು ಸಂಸ್ಥಾನದಲ್ಲಿ ಸಾಂಪ್ರದಾಯಿಕ ಕಲೆಯಲ್ಲಿ ನಿಪುಣರು. ಇವರ ಕಲೆಯನ್ನು ಮೆಚ್ಚಿ ಅಂದಿನ ಮುಮ್ಮುಡಿ ಕರಷ್ಣರಾಜ ಒಡೆಯರ್ ಚಿನ್ನದ ಪದಕ ನೀಡಿ ಗೌರವಿಸಿದ್ದರು. ಇಂದಿಗೂ ಅವರು ನಿರ್ಮಿಸಿದಂತಹ ಕಲೆಗಳು ಸಾಕಷ್ಟು ಶ್ರೀಮಂತರ ಮನೆಯಲ್ಲಿದೆ. ಆ ಕಲೆಯೇ ತಮಗೆ ರಕ್ತಗತವಾಗಿ ಬಂದಿದೆ ಎನ್ನುತ್ತಾರೆ. "ರಾಜ್ಯ ಪ್ರಶಸ್ತಿ," ಜಕಣಾಚಾರಿ" ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗರಿಗಳು ಕಾಶಿರವರ ಮುಡಿಲೇರಿದೆ. ಇಷ್ಟೆಲ್ಲಾ ಪ್ರಸಿದ್ದಿ ಪಡೆದಿದ್ದರೂ ಕಾಶಿಯ ಗುಣ ಸ್ವಲ್ಪ ಮಾತ್ರವೂ ಬದಲಾಗಿಲ್ಲ. ಇದೇ ಅಲ್ಲವೇ ತುಂಬಿದ ಕೊಡ ತುಳುಕುವುದಿಲ್ಲ ಎಂದರೆ.
ಉತಮಪಡಿಸ್ಲಾಗದ ಬರಹ
ಇನ್ನೂ ಉತ್ತಮವಾಗಬಹುದು
ಒಳ್ಳೆಯ ಬರಹ
ಚೆನ್ನಾಗಿದೆ!
ಉತ್ತಮ ಬರಹ!

ಹೀಗೊಂದಿಷ್ಟು ಜೋಕ್

ಹುಡುಗಿಯೊಬ್ಬಳು ಜೂಲು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು. ಇವಳನ್ನು ಒಲಿಸಿಕೊಳ್ಳಬೇಕೆಂದು ಯುವಕನೊಬ್ಬ

ಯುವಕ : ಮೇಡಂ ನಾಯಿ ಸಕತ್ತಾಗಿದೆ

ಮೇಡಂ : ಓಹ್ ಥ್ಯಾಂಕ್ಸ್

ಯುವಕ : ನಾಯಿಯನ್ನು ಒಮ್ಮೆ ಮುದ್ದಾಡಲಾ

ಮೇಡಂ : ಓಹ್, ಖಂಡಿತವಾಗಿ

ಯುವಕ : ( ಮುದ್ದಾಡುತ್ತಾ ) ನಾಯಿ ನೀನು ಎಷ್ಟು ಚೆನ್ನಾಗಿದ್ದೀಯಾ. ನಿನ್ನ ಮುಖಕ್ಕೊಂದು ನನ್ನ ಮುತ್ತು.

ಮೇಡಂ : ಸರ್, ಅದರ ಮುಖ ಈ ಕಡೆ ಇದೆ.



ಹೆಂಡತಿ : ರೀ ನಿಮ್ಮ ಮೊಬೈಲ್ ಕದ್ಕೊಂಡು ಹೋಗ್ತಾ ಇದಾನೆ ಹಿಡೀರಿ.

ಗಂಡ : ಎಲ್ಲೇ ಹೋಗ್ತಾನೆ. ಬ್ಯಾಟರಿ ಖಾಲಿಯಾದ ಮೇಲೆ ನಮ್ಮ ಮನೆಗೆ ಬರಬೇಕು.

ಹೆಂಡತಿ : ಯಾಕೆ

ಗಂಡ : ಚಾರ್ಜರ್ ನಮ್ಮ ಮನೆಲೇ ಅಲ್ವಾ ಇರೋದು



4 ಜನ ಯುವಕರು ರೈಲ್ವೇ ಸ್ಟೇಷನ್ ಗೆ ಬಂದರು. ಆಗಲೇ ರೈಲು ಹೊರಟಿತ್ತು. ಅದರಲ್ಲಿ ಒಬ್ಬ ಓಡಿ ಹೋಗಿ ರೈಲಿನಲ್ಲಿ ಕೂತ. ಮಿಕ್ಕ ಮೂರು ಜನ ಸ್ಟೇಷನ್ನಲ್ಲೇ ಬೇಜಾರಿನಿಂದ ಕೂತರು. ಅಷ್ಟೊತ್ತಿಗೆ ಬಂದ ರೈಲ್ವೆ ಮಾಸ್ಟರ್ ಹೋಗ್ಲಿ ಬಿಡಿ. ಅಂತೂ ಒಬ್ಬರಾದರೂ ಹೋದರಲ್ಲ ಅಂದ. ಅದಕ್ಕೆ ಈ ಮೂವರು. ಸರ್ ಊರಿಗೆ ಹೋಗಬೇಕಾಗಿದ್ದವರು ನಾವು. ಅವನು ಸೀಟು ಹಿಡಿಯುವುದಕ್ಕೆ ಅಂತಾ ಬಂದಿದ್ದ.



ರೋಗಿಯೊಬ್ಬನಿಗೆ ಗಂಟಲು ಕೆಟ್ಟಿತ್ತು. ವೈದ್ಯರ ಮನೆಗೆ ಹೋಗಿ ಬಾಗಿಲು ಬಡೆದ. ವೈದ್ಯರ ಹೆಂಡ್ತಿ ಬಾಗಿಲು ತೆಗೆದು.

ವೈ.ಹೆಂಡ್ತಿ : ಯಾರ್ ಬೇಕಾಗಿತ್ತು

ರೋಗಿ : (ಮೆಲು ದನಿಯಲ್ಲಿ) ಡಾಕ್ಟ್ರು ಇದಾರಾ

ವೈ.ಹೆಂಡ್ತಿ : ಮೆಲು ದನಿಯಲ್ಲೇ ಅವರು ಇಲ್ಲಾ, ಒಳಗೆ ಬನ್ನಿ.



ದೀಪಾವಳಿ ಹಬ್ಬ ಸಣ್ಣ ಹುಡುಗ ಪಟಾಕಿ ಬೇಕೆಂದು ಹಠ ಮಾಡ್ತಿದ್ದ,

ಅಮ್ಮ : ಈಗಾಗಲೆ ಸಾವಿರ ರೂಪಾಯಿ ಪಟಾಕಿ ಹೊಡೆದಿದ್ದೀಯಾ ಇನ್ನು ಬೇಕಾ ಎಂದು ಬೈಯುತ್ತಾ ಅಡುಗೆ ಮನೆಗೆ ಹೋದಳು

ಹುಡುಗ : ಅಮ್ಮಾ ರೂಂನಲ್ಲಿ ಇನ್ನೊಂದು ಕೆಂಪು ಬಣ್ಣದ್ದು ದೊಡ್ಡ ಪಟಾಕಿ ಇದೆ. ಬೆಂಕಿ ಹಚ್ಲಾ.

ಅಮ್ಮ : ಅಯ್ಯೋ ಗೂಬೆ. ಅದು ಸಿಲಿಂಡರ್ ಕಣೋ



ಗುಂಡ ಬೆಂಗಳೂರಿನಿಂದ ಬಾಂಬೆಗೆ ಹೋಗಬೇಕಾಗಿತ್ತು. ರೈಲು ಫುಲ್ ರಷ್ ಆಗಿತ್ತು. ಸೀಟಿಗಾಗಿ ಏನ್ ಮಾಡ್ಬೇಕು ಅಂತಾ ಯೋಚಿಸ್ತಿದ್ದ. ಹಾವು,ಹಾವು ಅಂತಾ ಜೋರಾಗಿ ಕೂಗಿದ. ಬೋಗಿಯಲ್ಲಿ ಇದ್ದವರೆಲ್ಲಾ ಇಳಿದು ಓಡಿದರು. ಅಬ್ಬಾ ಎಲ್ಲಾ ಸೀಟು ಖಾಲಿ ಆಯ್ತಲ್ಲಾ ಹಾಗೇ ನಿದ್ದೇ ಹೋದ. ಬೆಳಗ್ಗೆ ಎದ್ದಾಗ ಬೋಗಿ ಬೆಂಗಳೂರು ಸ್ಟೇನಲ್ಲೇ ಇತ್ತು. ಯಾಕೆ ಸರ್ ಟ್ರೇನ್ ಬಾಂಬೆಗೆ ಹೋಗಲಿಲ್ವಾ. ಹೋಯ್ತಲ್ಲಾ ಅಂದ ಸ್ಟೇಷನ್ ಮಾಸ್ಟರ್. ಮತ್ತೆ ಈ ಬೋಗಿ ಇಲ್ಲೇ ಇದೆ. ಇದರಲ್ಲಿ ಹಾವು ಇತ್ತು ಅಂತಾ, ಈ ಬೋಗಿಯೊಂದನ್ನು ಬಿಟ್ಟು ಹೋಗಿದ್ದಾರೆ ಅಂದಾಗ, ಗುಂಡನ ಮುಖ ಸಪ್ಪಗೆ ಆಗಿತ್ತು.





ಮೇಷ್ಟ್ರು : ಸ್ಕೂಲಿಗೆ ಬರದೆ ಎಲ್ಲಿಗೋ ಹೋಗ್ತೀಯಾ ಅಂತಾ ಹುಡುಗನೊಬ್ಬನಿಗೆ ಹೊಡಿತಾ ಇದ್ದರು.

ಹುಡುಗನ ಅಪ್ಪ ; ಹಾಕಿ ಸರ್, ಇನ್ನೊಂದು ನಾಲ್ಕು ಹಾಕಿ

ಮೇಷ್ಟ್ರು : ನೋಡೋ ನಿಮ್ಮ ಅಪ್ಪನಿಗೆ ವಿದ್ಯಾಭ್ಯಾಸ ಎಂದರೆ ಎಷ್ಟು ಇಂಟರೆಸ್ಟ್

ಹುಡುಗನ ತಂದೆ : ಹಂಗೇನಿಲ್ಲಾ, ಬೆಳಗ್ಗೆ ಎಮ್ಮೆ ಮೇಯಿಸಲಿಕ್ಕೆ ಹೋಗು ಅಂದ್ರೆ ಇಲ್ಲಿ ಬಂದಿದಾನೆ. ಹಾಕ್ರಿ ಮೇಷ್ಟ್ರೆ.



ಮೂರು ಜನ ಹೆಂಗಸರು ಕಟ್ಟೆ ಮೇಲೆ ಕೂತು ಅವರ ಗಂಡಂದಿರ ಮರೆಗುಳಿ ತನವನ್ನು ಹೇಳುತ್ತಾ ಕೂತಿದ್ದರು.

1 : ನಮ್ಮ ಯಜಮಾನ್ರಿಗೆ ಮರೆವೂ ರೀ. ಬೆಳಗ್ಗೆ ಒಂದು ಡಬರಿ ಉಪ್ಪಿಟು ತಿಂದಿರ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಬಂದು ಏನೇ ನಂಗೆ ತಿನ್ನಕ್ಕೆ ಏನೂ ಕೊಟ್ಟಿಲ್ಲ. ಇವತ್ತು ಏಕಾದಶಿಯೇನೇ ಅಂತಾರಿ.



2 : ನಮ್ಮ ಯಜಮಾನ್ರೂದೂ ಅದೇ ರೀ, ಆಫೀಸಿಗೆ ಹೋಗಿರ್ತಾರೀ, ಬರ್ತಾ ಛತ್ರಿನೋ ,ಬ್ಯಾಗನೋ ತಂದಿರ್ತಾರ್ರೀ. ಏನ್ರೀ ಇದು ಅಂದ್ರೆ. ನನಗೆ ಮರೆವು ಅಂತ್ಯಲ್ಲಾ ನೋಡು ಅಂತಾರೆ. ನಿಜ ನೋಡಿದರೆ ಅವರು ಆಫಿಸಿಗೆ ಛತ್ರಿ, ಬ್ಯಾಗು ತೊಗಂಡು ಹೋಗೇ ಇರಲ್ಲಾರೀ, ಯಾರದೋ ಹೊಡ್ಕೊಂಡು ಬಂದಿರ್ತಾರ್ರೀ



3 : ನಮ್ಮ ಯಜಮಾನ್ರಗೂ ಮರೆವೂ ರೀ. ರಾತ್ರಿ ಜೊತೆ ಕೂತು, ಊಟ ಮಾಡಿ, ಎಲೆ ಅಡಿಕೆ ಹಾಕ್ಕೊಂಡು, ಮಲಗೋ ತನಕಾ ಚೆನ್ನಾಗೇ ಇರ್ತಾರೆ. ಬೆಳಗ್ಗೆ ಎದ್ದು ಯಾಕೇ ಅಕ್ಕಾ ನನ್ನ ರೂಂನಲ್ಲಿ ಬಂದು ಮಲಿಗಿದಿಯಾ ಅಂತಾರ್ರೀ......

ಒಂದು ಬಸ್ನಲ್ಲಿ - ಏಕಪಾತ್ರಾಭಿನಯ

ಯಾರ್ರೀ ಸವಳಂಗ,ಶಿವಮೊಗ್ಗ,ಶಿವಮೊಗ್ಗ,ಶಿವಮೊಗ್ಗ. ಬೇಗ ಬೇಗ ಹತ್ಕೊಳ್ರಿ. ಇನ್ನು ಐದು ನಿಮಷ ಮಾತ್ರ ಇದೆ ನೋಡಿ.

ಸೇಂಗಾ,ಸೇಂಗಾ. ಮಾವಿನಕಾಯಿ, ರೂಪಾಯಿಗೆರಡು ಕಿತ್ತಲೆ,ಕಿತ್ತಲೆ, ಹಮಾಲಿ,ಹಮಾಲಿ

ಬೇಗ ಬೇಗ ಇಳೀರಿ. ಹತ್ತೋ ಬೇಗ ಅಲ್ಲಿ ಸೀಟು ಬೇರೆ ಇಲ್ಲ. ಏ ರಾಜು ಕರ್ಚೀಫ್ ಹಾಕೋ. ಏ ನಮ್ದು ಬಿಡ್ರೀ ಸೀಟು. ನಮ್ಮ ಅಪ್ಪ, ಅಮ್ಮ ಅಲ್ಲಿ ಹಿಂದಗಡೆ ಬರ್ತಾ ಇದಾರೆ. ಅಣ್ಣಾ ಮೇಲುಗಡೆ ಎರಡು ಚೀಲ ಹಾಕಿದೀನಿ 10ರೂಪಾಯಿ ಕೊಡ್ರಿ. ಹಗ್ಗ ಕಟ್ಟಿದ್ದೀನಿ ಅದೇ ನಿಮ್ಮ ಚೀಲ. ಸರಿ ಬಿಡಪ್ಪಾ. ಅಯ್ಯಯ್ಯಪ್ಪಾ ಏನ್ ಸೆಕೇರಿ. ರೀ ಡ್ರೈವರ್ ಬೇಗ ಹೋಗ್ ಬಾರದಾ. ತಡಿಯಮ್ಮಾ ಇನ್ನು ಎರಡು ನಿಮಷ ಇದೆ. ಕಂಡಕ್ಟರ್ ಒಂದ್ನಿಮಿಷ ಟಾಯ್ಲೆಟ್ ಗೆ ಹೋಗಿ ಬಂದು ಬಿಡುತ್ತೇನೆ. ಇಷ್ಟೊತ್ತನಕ ಏನ್ರೀ ಮಾಡ್ತೀದ್ರಿ ಸರಿ ಸರಿ.

ಸವಳಂಗ ಬಿಟ್ಟರೆ ಬೇರೆ ಎಲ್ಲೂ ಸ್ಟಾಪ್ ಇಲ್ಲಾ ನೋಡ್ರಿ. ಯಾರಾದರೂ ಮಧ್ಯದ ಹಳ್ಳೀಯೋರು ಇದ್ರೆ ಈಗಲೇ ಇಳ್ಕೊಂಬಿಡ್ರಿ.ಸ್ವಲ್ಪ ಮುಂದೆ ಹೋಗ್ರೀ ಬಾಗಿಲಲ್ಲೇ ನಿಂತ್ಕೊಂಡು ಸಾಯ್ತೀರಲ್ರೀ. ಪೊಲೀಸರು ಹಿಡಿದ್ರೆ ನಾವು ಪೆನಾಲ್ಟಿ ಕಟ್ಟಬೇಕು. ಟಿಕೆಟ್,ಟಿಕೆಟ್ , 2 ಶಿವಮೊಗ್ಗ ಕೊಡ್ರಿ. 60ರೂಪಾಯಿ ಕೊಡ್ರಿ. 500ರೂಪಾಯಿ ಕೊಟ್ಟರೆ ಹೇಗಮ್ಮಾ. ಚಿಲ್ಲರೆ ಇದ್ರೆ ಕೊಡ್ರಿ. ನೀವು ಎಲ್ಲಿಗ್ರಿ. ನನಗೂ ಒಂದು ಶಿವಮೊಗ್ಗ. 30ರೂಪಾಯಿ ಕೊಡ್ರಿ. 100ರೂಪಾಯಿ ಕೊಟ್ರೆ ಎಷ್ಟು ಜನಕ್ಕೆ ಅಂತಾ ಚಿಲ್ಲರೆ ಕೊಡ್ಲಿ ನೀವೇ ಹೇಳಿ. ಏ ರೋಡ್ ಲ್ಲಿ ಎರಡು ಸೀಟ್ ನಿಂತಿದಾರೆ ಎಲ್ಲಿಗೆ ಅಂತಾ ಕೇಳು. ಸಿರ್ಸಿ ಹೋಗುತ್ತಾ. ರೈಟ್,ರೈಟ್.

ರೀ ವಾಂತಿ ಮಾಡ್ ಬೇಕಾದ್ರೆ ಹೇಳೋದಲ್ವಾ. ನೋಡಿ ಮೈಮೇಲೆಲ್ಲಾ ಹಾರತಲ್ರೀ. ವಾಂತಿ ಹೇಳಿ ಕೇಳಿ ಬರುತ್ತಾ. ಕಿಟಕಿ ಹಾಕು. ಈ ಕಿಟಕಿ ಬೇರೆ ಹಾಕಿದ್ರೆ ಹಾಗೇ ತೆಕ್ಕೋಳತ್ತೆ. ಅದಕ್ಕೆ ಬಸ್ ನಿಂತಾಗ ಹಾಳು ಮೂಳು ತಿನ್ ಬೇಡ್ರಿ ಅನ್ನೋದು. ಏ ಸರಿಯಾಗಿ ನಿಂತ್ಕಳೊಕ್ಕೆ ಆಗ್ಲವಾ. ಮಕ್ಕಳು ಮರಿ ಮೇಲೆಲ್ಲಾ ಬೀಳ್ತೀರಲ್ರೀ. ಬಾರ್ ಹಿಡ್ಕೊಂಡು ನಿಂತಕ್ಳಳ್ರೀ.

ಹೆಂಗಸರು ಮೇಲೆಲ್ಲಾ ಬೀಳ್ತೀರಲ್ಲಾ ನಾಚಿಕೆ ಆಗೋಲ್ವಾ. ನಿಮಗೆ ಅಕ್ಕ, ತಂಗಿ ಯಾರು ಇಲ್ವಾ. ಎಲ್ಲಾರೂ ಇದಾರೆ ಆದರೆ ಅವರಿಗೆಲ್ಲಾ ಹೀಗೆ ಮಾಡೋಕೆ ಆಗುತ್ತಾ ಮೇಡಂ. ರೀ ನಿಲ್ಲಿಸಿರಿ. ನಮ್ಮ ಯಜಮಾನ್ರು ಟಾಯ್ಲೆಟ್ ಗೆ ಅಂತಾ ಹೋದೋರು ಬಂದೇ ಇಲ್ವಲ್ರೀ. ಅಯ್ಯೋ ನೆಕ್ಸ್ಟ್ ಬಸ್ ಗೆ ಬರ್ತಾರೆ ಬಿಡಮ್ಮ. ಎರಡು ಟಿಕೆಟ್ ಷಾರ್ಟೇಜ್ ಬರ್ತಾ ಇದೆ. ಟಿಕೆಟ್ ಮಾಡಿಸದೇ ಇರೋರು ಬೇಗ ಮಾಡ್ಸಿ. ಕಿಟಕಿ ಹಾಕಮ್ಮಾ ಮಳೆ ನೀರೆಲ್ಲಾ ಒಳಗೆ ಬರ್ತಾ ಇದೆ. ಮಗೂ ಅಳುತ್ತೆ ಅದಕ್ಕೆ ತೆಗೆದಿದ್ದೆ. ಸಾರಿ. ಏನಪ್ಪಾ ಡ್ರೈವರ್ ಹಿಂಗೆ ಹೊಡಿತಾನೆ. ಕೊನೇ ಸೀಟ್ ಲ್ಲಿ ಕೂರಕ್ಕೆ ಆಗಲ್ಲಾ. ಹೊಸಬ ಸಾರ್. ಹೇಳಿದ್ರೆ ಕೇಳಲ್ಲ. ಕಂಪೆನಿಗೆ ಕಂಪ್ಲೇಂಟ್ ಮಾಡ್ರಿ. ಅವಾಗ ಗೊತ್ತಾಗುತ್ತೆ.

ಇದು ಯಾರೀದ್ರಿ ಲಗ್ಗೇಜ್. ಟಿಕೆಟ್ ಆಗಿಲ್ವಲ್ರೀ. ಅದರಲ್ಲಿ ಬರೀ ಬಟ್ಟೆ ಮಾತ್ರ ಇದೆ. ಆದ್ರೂ ಅರ್ಧ ಟಿಕೆಟ್ ಆದ್ರೂ ತೊಗಳ್ಳೇಬೇಕು. ಚೆಕಿಂಗ್ ಬಂದ್ರೆ ನಾವು ಮನೆಗೆ ಹೋಗಬೇಕಾಗುತ್ತೆ. ಟಿವಿ ಸೌಂಡ್ ಕಮ್ಮಿ ಮಾಡಕ್ಕೆ ಹೇಳ್ರಿ.ತಲೇ ನೋವ್ತಾ ಇದೆ. ಹೊಸ ಫಿಲ್ಮ್ ಯಾವುದೂ ಇಲ್ಲ. ಯಾವಾಗ ಬಂದ್ರೂ ಇದೇ ಫಿಲ್ಮ್ ಹಾಕ್ತೀರಲ್ರೀ. ಸವಳಂಗ ಯಾರು ನೋಡ್ರಿ ಇಲ್ಲಿ ಬಿಟ್ರೆ ಇನ್ನು ಶಿವಮೊಗ್ಗನೇ. ಶಿವಮೊಗ್ಗ, ಶಿವಮೊಗ್ಗ. ಎಷ್ಟಾಗಿದೆ ಕಲೆಕ್ಷನ್. ನಿನ್ನೆಗಿಂತ ಡಲ್ಲೇ. ಮಳೆಗಾಲ ಅಲ್ವಾ ಅದಕ್ಕೆ. ರೈಟ್,ರೈಟ್.

ಸೂಪರ್ ಬೈಕ್ - 1000ಸಿಸಿ


ಮಾರುಕಟ್ಟೆಗೆ ಹೊಸದಾಗಿ 1000 ಸಿ.ಸಿ ಬೈಕ್ ನ್ನು "ಫಾರ್ಮರ್ಸ್ ಕಂಪೆನಿ"ಯಿಂದ ಬಿಡುಗಡೆ ಮಾಡಲಾಗಿದೆ. ನೋ ಪೆಟ್ರೋಲ್.

ಜಸ್ಟ್ ಒಂದು ಪೆಂಡಿ ಹುಲ್ಲು. ಒಂದು ಬಕ್ಕೆಟ್ಟು ನೀರು. ಪೆಂಡಿಗೆ/40ಕಿ.ಮೀ. ವೇಗ - 30km/hr.

ಇಂದೇ ಬುಕ್ ಮಾಡಿ. ಡೆಲಿವೆರಿ ಒಂದು ತಿಂಗಳ ನಂತರ. ಬೈಕ್ ನೊಂದಿಗೆ ಬಕ್ಕೆಟ್ ಫ್ರೀ.

ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು.
ಇವತ್ತು ನಾವು ಅರಣ್ಯ ಸಂಪತ್ತು ಹಾಳಾಗುತ್ತಿದೆ. ಗುಡ್ಡ ಬೆಟ್ಟಗಳೆಲ್ಲಾ ಹಾಳಾಗುತ್ತಿದೆ. ಇದು ಮುಂದಿನ ದಿನದ ಪರಿಸರ ನಾಶಕ್ಕೆ ನಾಂದಿ ಎಂದು ಎಲ್ಲರೂ ಚಿಂತಿಸುತ್ತಿದ್ದೇವೆ. ಹಾಗಾದರೆ ಇವತ್ತಿನ ಕೃಷಿ ಚಟುವಟಿಕೆ ಸರಿಯಾಗಿದೆಯಾ ಎನ್ನುವುದರ ಬಗ್ಗೆ ಕೂಡ ಚಿಂತನೆ ನಡೆಸಬೇಕಲ್ಲವೆ.




ಸಾಮಾನ್ಯವಾಗಿ ನೀರು ಹೆಚ್ಚಿನ ಮಟ್ಟದಲ್ಲಿ ಇರುವಂತವರು ತೋಟಕ್ಕೆ ಅಥವಾ ಭತ್ತದ ಬೆಳೆಗೆ ಮೊರೆ ಹೋಗುವುದನ್ನು ನಾವು ಕಂಡಿದ್ದೇವೆ. ಆದರೆ ಇದೀಗ ಪರಿಸ್ಥಿತಿ ಪೂರ್ಣ ಬದಲಾಗಿದೆ. ಯಾವಾಗ ಮೆಕ್ಕೆ ಜೋಳದ ಬೆಳೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿತು. ಹಾಗೇ ಇಂಡೋನೇಷಿಯಾ,ಸಿಂಗಪೂರ್,ಮಲೇಷಿಯಾದಂತಹ ದೇಶಗಳಿಗೆ ಮೆಕ್ಕೆಜೋಳ ರಫ್ತು ಆಗಲು ಆರಂಭಿಸಿತೋ ಜೋಳಕ್ಕೆ ಇನ್ನಿಲ್ಲದ ಬೇಡಿಕೆ ಆರಂಭವಾಯಿತು. ರೈತನಿಗೆ ನಿರೀಕ್ಷೆಗೂ ಮೀರಿದ ಹಣ ಸಿಗುವಂತಾಯಿತು. ಬಯಲುಸೀಮೆಗಳಲ್ಲಿ ಬೆಳೆಯುತ್ತಿದ್ದಂತಹ ಶೇಂಗಾ, ಸೂರ್ಯಕಾಂತಿ,ತೊಗರಿಗೆ ಹೆಚ್ಚಿನ ರೈತರು ಕಡಿವಾಣ ಹಾಕಿ ಮೆಕ್ಕೆ ಜೋಳಕ್ಕೆ ಮೊರೆ ಹೋದರು. ಹಾಗೇ ಅರೆ ಮಲೆನಾಡು ಪ್ರದೇಶಗಳಲ್ಲಿ ಭತ್ತ ಬೆಳೆಯುವ ಅವಕಾಶವಿದ್ದರೂ ಮೆಕ್ಕೆ ಜೋಳಕ್ಕೆ ಮೊರೆ ಹೋಗುತ್ತಿದ್ದಾರೆ. ಕಾರಣ ಕೇಳಿದರೆ ಎರಡು ಬಾರಿ ಗೊಬ್ಬರ ಹಾಕಿದರೆ ಸಾಕು ಹಾಗೇ ಒಮ್ಮೆ ಔಷಧಿ ಸಿಂಪಡಿಸಿದರೆ ಸಾಕು ಲಾಭ ನಿಶ್ಚಿತ. ಅದೇ ಭತ್ತ ಸೇರಿದಂತೆ ಇತರೆ ಬೆಳೆಗಳಿಗಾದರೆ ಆಗಾಗ ನೀರು ಹಾಯಿಸಬೇಕು,ಕಳೆ ತೆಗೆಸಬೇಕು.ಸಾಕಷ್ಟು ಖರ್ಚು. ಇದರ ಜೊತೆಗೆ ಭತ್ತದ ಬೆಲೆ ಯಾವಾಗ ಇಳಿಯುತ್ತದೋ ಎನ್ನುವ ಆತಂಕದ ವಿಷಯ ಎನ್ನುತ್ತಾರೆ. ಮೆಕ್ಕೆಜೋಳ ಎಂದಾಕ್ಷಣ ಡಿ.ಎ.ಪಿ ಮತ್ತು ಯೂರಿಯಾ ಗೊಬ್ಬರಗಳು ಅತೀ ಅವಶ್ಯ. ಕಳೆದ ವರ್ಷ ಹಾವೇರಿ ಗೋಲಿಬಾರ್ ಗೆ ಕಾರಣವಾದದ್ದು ಇದೇ ಡಿ.ಎ.ಪಿ., ಮೆಕ್ಕೆ ಜೋಳ ಎಂಬ ಬೆಳೆ ತನ್ನ ಸುತ್ತಮುತ್ತಲಿನ ಪ್ರದೇಶದ ನೀರನ್ನು ಸಾಕಷ್ಟು ಹೀರಿಕೊಳ್ಳುತ್ತದೆ. ಪದೇ, ಪದೇ ಇದೇ ಬೆಳೆಯನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದು ನಿಶ್ಚಿತ. ಹಾಗೇ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ. ಅದಕ್ಕಾಗಿ ರೈತ ಒಂದು ಚೀಲ ರಾಸಾಯನಿಕ ಗೊಬ್ಬರ ಸುರಿಯುವ ಕಡೆ ಎರಡು ಚೀಲ ಸುರಿಯುತ್ತಾನೆ. ಇದು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಕೃಷಿ ತಜ್ಞರು ಪ್ರತೀ ವರ್ಷ ಬೆಳೆಯನ್ನು ಬದಲಾಯಿಸಿ ಎನ್ನುತ್ತಾರೆ. ಹಾಳಾದ ಹಣದ ಆಸೆ ಹಾಗೂ ಮೈ ಜಡ್ಡುಗೂಡಿದ ಪರಿಣಾಮ ಮೆಕ್ಕೆಜೋಳಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಒಂದು ಮೆಕ್ಕೆಜೋಳದ ತೆನೆ ತಿಂದರೆ ದೇಹಕ್ಕೆ 5ಗ್ರಾಂ.ನಷ್ಟು ರಾಸಾಯಾನಿಕ ಗೊಬ್ಬರ ಹೋಗಿರುತ್ತದೆ. ಹಾಗೇ ಬರಬರುತ್ತಾ ಭೂಮಿ ಬರಡಾಗುತ್ತದೆ. ಮುಂದಿನ ದಿನಗಳಲ್ಲಿ ಆ ಭೂಮಿಯಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಇದರ ಬಗ್ಗೆ ಹಲವಾರು ಜಾಗೃತಿಕ ಕಾರ್ಯಕ್ರಮಗಳು ನಡೆದಿದೆಯಾದರೂ ವರ್ಷದಿಂದ ವರ್ಷಕ್ಕೆ ಮೆಕ್ಕೆ ಜೋಳದ ಬೆಳೆ ಮಾತ್ರ ಹೆಚ್ಚಾಗುತ್ತಿದೆ. ಪ್ರತೀ ವರ್ಷ ಗುಡ್ಡ ಸಮತಟ್ಟು ಮಾಡುವುದು, ಅರಣ್ಯ ನಾಶ ಮಾಡಿ ಮೆಕ್ಕೆ ಜೋಳ ಹಾಕುವುದು ಸಾಕಷ್ಟು ರೈತರ ಅಭ್ಯಾಸವಾಗಿದೆ. ಅರಣ್ಯ ಇಲಾಖೆಯವರ ಕಠಿಣ ಕ್ರಮಕ್ಕೆ ಮುಂದಾದರೆ ಜನಪ್ರತಿನಿಧಿಗಳ ಅಡ್ಡಗಾಲು. ಇದೊಂದು ಗೊತ್ತಿರದ ದೊಡ್ಡ ಸಮಸ್ಯೆ. ಇದು ನಿಶ್ಚಿತವಾಗಿ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ಭತ್ತ ಬೆಳೆಯುವವರು ಕೂಡ ಮೆಕ್ಕೆ ಜೋಳ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಕೇರಳಿಯನ್ನರ ಹಾವಳಿಯಿಂದಾಗಿ ಹಾವೇರಿ,ದಾವಣಗೆರೆ,ರಾಯಚೂರು,ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಇದೂ ಕೂಡ ಭೂಮಿಗೆ ಮಾರಕ. ಕೇರಳಿಯನ್ನರು ನೀಡುವ ಸ್ವಲ್ಪ ಹಣದ ಆಸೆಗೆ ತನ್ನ ಭೂಮಿ ನೀಡುತ್ತಿರುವ ರೈತ ಮುಂದೊಂದು ದಿನ ನಿಶ್ಚಿತವಾಗಿ ಪರೆದಾಡುತ್ತಾನೆ.

ಗಿಣಿ ಮೂತಿ ಟೊಮೆಟೊ


ಶಿಕಾರಿಪುರ ಪಟ್ಟಣದ ರವಿ ಎಂಬುವರ ಮನೆಯ ಹಿತ್ತಲಿನ ಟೊಮೊಟೊ ಗಿಡದಲ್ಲಿ ಗಿಣಿ ಮಾದರಿಯ ಟೊಮೊಟು ಒಂದು ಬಿಟ್ಟಿದೆ. ಎರಡು ಟೊಮೊಟೊಗಳು ಸಯಾಮಿ ರೂಪದಲ್ಲಿ ಇದ್ದು, ಅದರ ತೊಟ್ಟು ಗಿಣಿಯ ಕೊಕ್ಕಿನ ರೀತಿ ಇದೆ.

ಹೀಗೊಂದು ದೆವ್ವದ ಕಥೆ - ಹೆದರಬೇಡಿ

ನಮ್ಮದು ವಟಾರದ ಮನೆ. ಅಕ್ಕಪಕ್ಕದಲ್ಲಿ ಇರುವವರೆಲ್ಲಾ ಚಿಕ್ಕಪ್ಪ ದೊಡ್ಡಪ್ಪಂದಿರು. ಎಲ್ಲರೂ ಓಡಾಡುವುದಕ್ಕೆ ಓಣಿ ಇದೆ. ಇಲ್ಲಿ ದೊಡ್ಡಪ್ಪ ಕಟ್ಟಿಗೆ ಹಾಕಿದ್ದಾರೆ. ನಾವೊಂದಿಷ್ಟು ಗಿಡಗಳನ್ನು ಹಾಕಿದ್ದೇವೆ. ಮುಂದೆ ದೊಡ್ಡ ಬಾವಿ ಇದೆ. ಹತ್ತಾರು ವರ್ಷಗಳ ಹಿಂದೆ ಇದರಲ್ಲಿ ಕೆಲವರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ಮ ಬದುಕಿದ್ದಾಗ, ನಮ್ಮಲ್ಲಿ ಚಂಡಿ ಸಾಕಿದೀವಿ. ಅದು ಬೀಳೆ ಸೀರೇ ಉಡ್ಕೊಂಡು ರಾತ್ರಿಯೆಲ್ಲಾ ಓಡಾಡುತ್ತೆ. ಹಾಗೇ ನಿಮ್ಮ ದೊಡ್ಡಪ್ಪ ಸಾಯುವಾಗ ಅವರ ಇನ್ನೂ ಆಸೆ ತೀರಲಿಲ್ಲ. ಅವರೂ ಓಡಾಡುವ ಸಾಧ್ಯತೆ ಇದೆ. ಬಾವಿಯಲ್ಲಿ ಬಿದ್ದಿರೋರು ದೆವ್ವಾ ಆಗಿರೋ ಅವಕಾಶಗಳು ಹೆಚ್ಚು. ಹಂಗೆಲ್ಲಾ ರಾತ್ರಿ ಹೊತ್ತು ಹೊರ ಹೋಗಬೇಡ ಅನ್ನುತ್ತಿದ್ದಳು.

ಇವನೆಲ್ಲಿ ಎದ್ದು ಹೋಗ್ತಾನೆ ಅಂತಾನೋ, ಅಥವಾ ಏನಾದರೂ ಹೆದರು ಬಿಟ್ಟರೆ ಅನ್ನುವುದಕ್ಕೆ ಅಮ್ಮ ನುಡಿದಿರಬೇಕು. ರಾತ್ರಿ ಸಮಯ ಯಾವುದಾದರೂ ಪತ್ರಿಕೆ,ಪುಸ್ತಕ, ಬೇಜಾರು ಆಯ್ತೆಂದರೆ ಸಣ್ಣ ಧ್ವನಿಯಲ್ಲಿ ಸುಮಾರು ರಾತ್ರಿ 2ರವರೆಗೆ ಟಿವಿ ನೋಡೋ ಹವ್ಯಾಸವಾಗಿ ಬಿಟ್ಟಿದೆ. ಏನೂ ಇಲ್ಲಾ ಅಂದ್ರೆ ಯಾವುದಾದರೂ ವಿಷಯದ ಮೇಲೆ ರಾತ್ರಿಯಲ್ಲಿ ಬರೆಯುವುವ ಹವ್ಯಾಸ. ಈ ಸಮಯದಲ್ಲಿ ಮನೆಯೆಲ್ಲಾ ನಿಶ್ಯಬ್ದವಾಗಿರುತ್ತದೆ. ಇದ್ದಕ್ಕಿದ್ದಂತೆ ಓಣಿಯಲ್ಲಿ ಧಡಾ,ಧಡಾ ಅಂತಾ ಓಡಾಡುವ ಶಬ್ದ. ಆ ನಂತರ ಆ ಕಡೆಯಿಂದ ಈ ಕಡೆಗೆ ಓಡಿ ಹೋದಂತಾಗುವುದು. ಸ್ವಲ್ಪ ಹೊತ್ತು ಮತ್ತೆ ನಿಶ್ಯಬ್ದವಾದ ಮೇಲೆ. ಗಲ್,ಗಲ್ ಆಗ್ತಾ ಇತ್ತು. ಇತ್ತೀಚೆಗೆ ನನ್ನ ಹೆಂಡ್ತಿಗೆ ಹೇಳಿದೆ. ಏನು ಇದು ಅಂತಾ. ಹಂಗೆಲ್ಲಾ ಬಾಗಿಲು ತೆಗೆದು ಹೋಗಬೇಡ್ರಿ. ಯಾಕ್ ಬೇಕು ರಿಸ್ಕ್ ಅಂತಾ.

ಆದ್ರೆ ಕುತೂಹಲ ಅನ್ನುವುದು ಯಾರ ಅಪ್ಪನ ಮನೆಯದು.ಇದು ಏನೂಂತ ನೋಡಲೇಬೇಕು. ಕೆಲ ದಿನಗಳ ಹಿಂದೆ ಮತ್ತೆ ಇದೇ ಅನುಭವವಾಯ್ತು. ತಕ್ಷಣ ಹೊರಗಡೆ ದೀಪಹಾಕಿ ಬಾಗಿಲು ತೆಗದ್ರೆ ಯಾರೂ ಇಲ್ಲ. ಬಂದು ಒಳಕೂತೆ ಮತ್ತೆ ನಿಶ್ಯಬ್ದ. ಗಲ್,ಗಲ್ ಸೌಂಡ್. ಸ್ವಲ್ಪ ಮನಸಿಗೆ ಕಸಿವಿಯಾಯಿತು. ಇದು ಏನು ಅಂತಾ ನೋಡ್ಲೇ ಬೇಕಾಲ್ಲಾ ಅಂತಾ. ಮೊನ್ನೆ ರಾತ್ರಿ 12 ಆಗ್ತಿದ್ದಂಗೆ. ಬಾಗಿಲಿಗೆ ಚಿಲಕ ಹಾಕದೆ ಕಾಯ್ತಾ ಇದ್ದೆ. ಓಡಾಡುವ ಶಬ್ದ ಬಂತು. ಬಾಗಿಲು ತಕ್ಷಣ ತೆಗದರೆ, ಬಡ್ಡೀ ಮಗಂದು ಪಕ್ಕದ ಮನೆ ಹಸು ಗಿಡ, ಎಸೆದಿರೋ ತರಕಾರಿ ಸಿಪ್ಪೆ ತಿನ್ನೋಕೆ ಬಂದಿತ್ತು. ಸಮ್ನೆ ಒಳ ಬಂದೆ. ಮತ್ತೆ ಧಡಾ, ಧಡಾ ಅಂತಾ ಶಬ್ದ, ಬಾಗಿಲು ತೆಗೆದರೆ ಹೆಗ್ಗಣ ಧಿಡೀರ್ ಅಂತಾ ಬಂದರೆ ಹಸು ಓಡಿ ಹೋಗ್ತಾ ಇತ್ತು. ಹೊರಗಡೆ ಕತ್ತಲು ಇದ್ದುದರಿಂದ ಅದು ಕಟ್ಟಿಗೆ ಹಿಂದೆ ನಿಂತರೆ ಕಾಣ್ತಾನೇ ಇರ್ಲಿಲ್ಲ. ಓಹ್ ಅಂತು ಸಂಶೋಧನೆ ಮಾಡ್ದೆ ಅಂತಾ ಖುಷಿಯಾಗಿ ಒಳ ಬಂದು ಇದನ್ನು ಬೆಳಗ್ಗೆ ನನ್ನ ಹೆಂಡ್ತಿಗೆ ಹೇಳಬೇಕು ಅಂತಾ ಪುಸ್ತಕ ಓದುತ್ತಾ ಕೂತೆ.

ಆದರೆ ಗಲ್,ಗಲ್ ಶಬ್ದ ಮಾತ್ರ ಬರ್ತಾನೆ ಇತ್ತು. ಹೊರಗೆ ಹೋಗಿ ಎಲ್ಲಾ ನೋಡಿದ್ರೂ ಏನೂ ಇಲ್ಲ. ಕೊನೆಗೆ ಒಳ ಹೋಗಿ ನೋಡಿದ್ರೆ. ನೀರಿನ ಫಿಲ್ಟರ್ ನ್ನ ಸ್ಟೂಲ್ ಮೇಲೆ ಇದೆ. ಅದರಿಂದ ಬೀಳೋ ಒಂದಂದು ಹನಿ ಮನೆಯೆಲ್ಲಾ ನೀರಾಗುತ್ತೆ ಅಂತಾ ಕಳಗೆ ಒಂದು ಖಾಲಿ ಪಾತ್ರೆ ಇಡುವುದು ಅಭ್ಯಾಸ. ನೀರು ಮೇಲಿಂದ ಪಾತ್ರೆಯೊಳಗೆ ಬಿದ್ದಾಗಲೆಲ್ಲಾ ಈ ರೀತಿ ಶಬ್ದ ಕೇಳಿಸ್ತಾ ಇತ್ತು. ಅಂತೂ ಒಂದು ಹಲವು ದಿನಗಳ ಭಯ ಮತ್ತು ಕುತೂಹಲಕ್ಕೆ ಅಂತ್ಯ ಸಿಕ್ಕಿತಲ್ಲಾ ಅಂತಾ ಖುಷಿಯಾದೆ. ಅವಳಿಗೂ ಹೇಳಿದೆ. ಹೌದಾ. ನಾನೂ ಹಂಗೇ ಅನ್ಕಂಡಿದ್ದೆ ಅಂದ್ಲು.

ಪೃಥ್ವಿ ಎಂಬ ಉತ್ತಮ ಚಿತ್ರ - ವಿಮರ್ಶೆ

ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪೃಥ್ವಿ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾರೆ. ಸರ್ಕಾರ ಇವರನ್ನು ಬಳ್ಳಾರಿಗೆ ನಿಯೋಜಿಸುತ್ತದೆ. ಬಳ್ಳಾರಿಯು ಗಣಿಧಣಿಗಳ ಅಟ್ಟಹಾಸದಲ್ಲಿ ಮೆರೆಯುತ್ತಿದೆ ಎನ್ನುವುದನ್ನು ಮೊದಲು ಕುಲಂಕುಷವಾಗಿ ಅರಿತು. ಒಬ್ಬರಾದ ನಂತರ ಒಬ್ಬರಿಗೆ ನಿಧಾನವಾಗಿ ಕಡಿವಾಣ ಹಾಕುತ್ತಾ ಬರುತ್ತಾರೆ. ಅಧಿಕಾರ ಹಾಗೂ ಹಣವಿರುವ ಗಣಿಧಣಿಗಳು ಇನ್ನಿಲ್ಲದ ಹಿಂಸೆಯನ್ನು ನೀಡುತ್ತಾರೆ. ರೌಡಿ ಪಡೆಗಳಿಂದ ಕೊಲೆ ಮಾಡುವ ಸಂಚೂ ಕೂಡ ನಡೆಯುತ್ತದೆ. ಸರ್ಕಾರದಿಂದ ಕಾರ್ಯಗಳಿಗೆ ಅಡ್ಡಿ ಬರುತ್ತದೆ. ಆದರೂ ಯಾವುದಕ್ಕೂ ಮಣಿಯದೆ ತನ್ನ ಕಾರ್ಯವನ್ನು ನಿಷ್ಠೆಯಿಂದ ಒಬ್ಬ ಅಧಿಕಾರಿ ನಿರ್ವಹಿಸುತ್ತಾನೆ. ಇದು ಇತರರಿಗೆ ಮಾದರಿಯಾಗಿದೆ ಎನ್ನುವುದನ್ನು ತೋರಿಸುತ್ತದೆ.

ಈ ಸಂದರ್ಭದಲ್ಲಿ ನಾಯಕಿ ತಮಗೆ ಬಳ್ಳಾರಿ ಬೇಡವೇ ಬೇಡ, ಬೇರೆಯಾವುದಾದರೂ ಜಿಲ್ಲೆಗೆ ಹೋಗಿ ಸಂತೋಷವಾಗಿ ಇರೋಣವೇಂದಾಗ, ಇಲ್ಲಿನ ಕೊಳೆಯನ್ನು ತೊಳೆದೇ ನನ್ನ ಮುಂದಿನ ಕಾರ್ಯ ಎಂದು ನಾಯಕ ಹೇಳುವುದು ಎಲ್ಲರನ್ನೂ ಮೆಚ್ಚಿಸುತ್ತದೆ. ಇದರ ಮಧ್ಯೆ ಅಲ್ಲಿನ ಜನರ ದಯನೀಯ ಸ್ಥಿತಿಯ ಜೀವನ, ಕಲುಷಿತ ನೀರಿನ ಸಮಸ್ಯೆಯನ್ನು ಒಂದಾದರೊಂದರಂತೆ ಬಗೆಹರಿಸುತ್ತಾ ಬರುತ್ತಾನೆ ನಾಯಕ. ತಂದೆ, ತಾಯಿಗಳ ಪ್ರೀತಿ ಬಹಳ ಚೆನ್ನಾಗಿ ತೋರಿಸಲಾಗಿದೆ. ಪ್ರೌಢ ಅಭಿನಯವನ್ನು ನೀಡಿರುವ ಪುನೀತ್ ತಾನು ಅಪ್ಪನಿಗಿಂತ ಏನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಸಾಧು ಕೋಕಿಲರ ತಮಾಷೆ ಚೆನ್ನಾಗಿದೆ. ಚಿತ್ರದಲ್ಲಿ ಎಲ್ಲೂ ಅದ್ದೂರಿತನ ಇಲ್ಲ. ಪ್ರತಿಯೊಂದು ಸಂಭಾಷಣೆಯೂ ಚಿತ್ರದ ಕಥೆಗೆ ಸಹಕರಿಯಾಗುತ್ತಾ ಸಾಗಿದೆ. ಅನವಶ್ಯಕ ಹಾಗೂ ಗೊಂದಲದ ಸೀನ್ಗಳು ಎಲ್ಲೂ ಸಿಗುವುದಿಲ್ಲ. ಇದು ಈಗಿನ ಸರ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಧ್ಯದಲ್ಲಿ ಬರುವ ಉತ್ತಮ ಹಾಡುಗಳು ಮನಸ್ಸನ್ನು ಮುದಗೊಳಿಸುತ್ತದೆ. ನಿರ್ದೇಶಕ ತನ್ನ ಕಾರ್ಯ ಚೆನ್ನಾಗಿಯೇ ನಿರ್ವಹಿಸಿದ್ದಾನೆ ಎನ್ನಬಹುದಾಗಿದೆ. ಚಿತ್ರ ಬಿಡುಗಡೆಯಾದ ನಂತರ ಗಣಿಧಣಿಗಳ ವಿರೋಧಿ ಅನಿಲ್ ಲಾಡ್ ಈ ಚಿತ್ರ ತೆಗೆಸಿದ್ದಾರೆ ಎಂಬ ಸುದ್ದಿಯೆದಾರೂ, ಪ್ರಸಕ್ತ ಸ್ಥಿತಿಗೆ ಸರಿಯಾಗಿದೆ. ದೇವೆಗೌಡ, ಶ್ರೀರಾಮುಲು,ಜನಾರ್ಧನರೆಡ್ಡಿ,ಯಡಿಯೂರಪ್ಪ ಚಿತ್ರ ನೋಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತ ಥಿಯೇಟರಿಗೆ ತೆರಳಿ ನೋಡಬಹುದಾದ ಚಿತ್ರವಾಗಿದೆ. ಇವತ್ತಿನ ಕನ್ನಡ ಸಿನಿಮಾಗಳಲ್ಲಿ ಇದೊಂದು ಉತ್ತಮ ಚಿತ್ರ ಎಂದರೆ ತಪ್ಪಾಗಲಾರದು